ಬೆಂಗಳೂರು: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಹರಡುವಿಕೆಯನ್ನು ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತ್ಯ 40 ಸಾವಿರ ಟೆಸ್ಟ್ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಪ್ರತ್ಯೇಕ ಟೆಸ್ಟಿಂಗ್ ಮಾಡಲಾಗುತ್ತಿದೆ. ಪಾಸಿಟಿವ್ ಬಂದವರ ಕೋವಿಡ್ ಮಾದರಿಯನ್ನು ವಂಶವಾಹಿ ಪತ್ತೆಗೆ ಕಳುಹಿಸಲಾಗುತ್ತಿದೆ. ನೆಗೆಟಿವ್ ಬಂದ ಪ್ರಯಾಣಿಕರಿಗೂ 7 ದಿನದ ಬಳಿಕ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಅಲ್ಲಿಯವರೆಗೂ ಸ್ವಯಂ ಪ್ರತ್ಯೇಕವಾಗಿರುವುದು ಉತ್ತಮ ಎಂದು ಅವರು ತಿಳಿಸಿದರು.
ವಿಶ್ವದ ಬೇರೆ ದೇಶಗಳಿಂದ ಜನರ ಪ್ರಯಾಣ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಕೋವಿಡ್ ಏರಿಕೆಯಾಗುತ್ತಿರುವ ಹಿನ್ನೆಲೆ ಎಲ್ಲ ಕಡೆ ಓಡಾಟ ನಡೆಸಲು ಸಾರ್ವಜನಿಕರಿಗೆ ಯುನಿವರ್ಸಲ್ ಪಾಸ್ ಸಿಸ್ಟಂನ್ನು ಮಹಾರಾಷ್ಟ್ರದಲ್ಲಿ ಜಾರಿಗೆ ತರಲಾಗಿದೆ. ಆದರೆ, ಈ ಪಾಸ್ ವ್ಯವಸ್ಥೆ ನಗರದಲ್ಲಿ ಸದ್ಯಕ್ಕೆ ಅಗತ್ಯವಿಲ್ಲ. ನಗರದ ಜನ ನಿಬಿಡ ಕೆಲ ಪ್ರದೇಶಗಳಿಗೆ ಮಾತ್ರ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡಲಾಗಿದೆ. ಫೋನ್ನಲ್ಲಿರುವ ಪ್ರಮಾಣ ಪತ್ರ ತೋರಿಸಿ ಮಾಲ್, ಪಾರ್ಕ್, ಥಿಯೇಟರ್ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು.
ನಗರದಲ್ಲಿ ಹೊಸ ವರ್ಷ ಆಚರಣೆ, ಕ್ರಿಸ್ ಮಸ್ ಆಚರಣೆ ವೇಳೆ 144 ಸೆಕ್ಷನ್ ಜಾರಿಗೆ ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳು ಸಿಎಂ ನೇತೃತ್ವದ ಉನ್ನತ ಮಟ್ಟದಲ್ಲಿ ಸಮಿತಿಯಲ್ಲಿ ಚರ್ಚೆ ನಡೆದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಬಿಬಿಎಂಪಿ ಕೂಡಾ ಈ ಬಗ್ಗೆ ಶಿಫಾರಸು ಮಾಡುವ ಬಗ್ಗೆ ಚಿಂತಿಸುತ್ತಿದೆ ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ, ಲಸಿಕೆ ಹಂಚಿಕೆ, ಕ್ವಾರಂಟೈನ್, ಚಿಕಿತ್ಸೆ ಸಂಬಂಧ ಇಂದು ಮುಖ್ಯ ಆಯುಕ್ತರು ಆಡಳಿತಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಇದನ್ನೂ ಓದಿ: ಕೊರೊನಾ ಲಸಿಕೆ ಹೆಸರಲ್ಲಿ ಕೋಟಿ ಕೋಟಿ ಕದ್ದ ಸೈಬರ್ ಕಳ್ಳರು.. ಈ ವೈದ್ಯರಿಗೆ 11.80 ಕೋಟಿ ರೂ. ವಂಚನೆ!