ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿಯವರು ಕಳೆದ ವರ್ಷ ಜುಲೈ 28ರಂದು ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಬಿಜೆಪಿ ಸರ್ಕಾರದಲ್ಲಿ ಇವರೆಷ್ಟು ದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿಯಾರು?, ತಂದೆ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಷ್ಟು ದಿನವೂ ಆಡಳಿತ ನಡೆಸುತ್ತಾರೋ ಇಲ್ಲವೋ? ಅಥವಾ ತಂದೆಯಂತೆ ಅಲ್ಪಾವಧಿಯಲ್ಲಿಯೇ ಅಧಿಕಾರ ಕಳೆದುಕೊಳ್ಳಬಹುದೆಂದು ಮಾತನಾಡಿಕೊಂಡವರೇ ಹೆಚ್ಚು.
ಬೊಮ್ಮಾಯಿ ಹೆಜ್ಜೆಹೆಜ್ಜೆಗೂ ರಾಜಕೀಯ ಅನಿಶ್ಚಿತತೆಯ ಸವಾಲುಗಳಿದ್ದವು. ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯನ್ನು ಆಗ ಬದಲಿಸುತ್ತಾರೆ, ಈಗ ಬದಲಿಸುತ್ತಾರೆ. ಇದೇ ತಿಂಗಳು ಕೊನೆ. ಈ ಬಾರಿ ಸಿಎಂ ಬೊಮ್ಮಾಯಿವರನ್ನು ಖಂಡಿತ ಬದಲಿಸಿಯೇ ಬಿಡುತ್ತಾರೆ ಎನ್ನುವ ಗೊಂದಲಗಳು ಹಾಗು ಹಲವಾರು ಸವಾಲುಗಳ ನಡುವೆಯೇ ಬಸವರಾಜ ಬೊಮ್ಮಾಯಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ವರ್ಷದ ಆಡಳಿತ ಪೂರೈಸಿದ್ದಾರೆ. ಈ ಮುಖೇನ ತಾವೊಬ್ಬ ಬುದ್ಧಿವಂತ ರಾಜಕಾರಣಿಯೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿ 1988ರಲ್ಲಿ ಜನತಾದಳ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಪಕ್ಷದಲ್ಲಿನ ಭಿನ್ನಮತೀಯ ಚಟುವಟಿಕೆಗಳಿಂದಾಗಿ ಕೇವಲ 8 ತಿಂಗಳ ಆಡಳಿತಾವಧಿಯಲ್ಲಿಯೇ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಬಸವರಾಜ ಬೊಮ್ಮಾಯಿವರು ಸಹ ಬಿಜೆಪಿಯಲ್ಲಿನ ಒಳ ರಾಜಕೀಯಕ್ಕೆ ಬಲಿಯಾಗಿ ಮೂರರಿಂದ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು.
ಈ ಸಂಬಂಧ ತೆರೆಮರೆಯಲ್ಲಿ ಬಸವರಾಜ ಬೊಮ್ಮಾಯಿ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಚಿಂತನೆಯೂ ನಡೆದಿತ್ತು ಎನ್ನಲಾಗಿದೆ. ಈ ವಿದ್ಯಮಾನಗಳಿಂದಾಗಿ ಬಸವರಾಜ ಬೊಮ್ಮಾಯಿಯವರೂ ಯಾವಾಗ ಬೇಕಾದರೂ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬಹುದೆಂದು ವಿಶ್ಲೇಷಣೆ ಮಾಡಲಾಗುತ್ತಿತ್ತು.
ಆದರೆ ಬೊಮ್ಮಾಯಿಯವರು ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ಸಿಎಂ ಬದಲಾವಣೆ ತೂಗುಕತ್ತಿಯಿಂದ ಪಾರಾಗುತ್ತಿದ್ದಾರೆ. ತಂದೆಗಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಯಾಗಿ ವರ್ಷದ ಆಡಳಿತ ಪೂರೈಸಿ ಪ್ರಸಕ್ತ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವ ತನಕ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಬಸವರಾಜ ಬೊಮ್ಮಾಯಿ ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಿಎಂ ಯಡಿಯೂರಪ್ಪನವರ ಬೆಂಬಲಿಗರು. ಇವರು ಹೈಕಮಾಂಡ್ ಆಯ್ಕೆ ಅಭ್ಯರ್ಥಿ ಅಲ್ಲ ಎನ್ನುವ ಕಾರಣಕ್ಕೆ ಸಿಎಂ ಸ್ಥಾನದಿಂದ ಬದಲಾವಣೆ ಮಾಡುವಂತೆ ಪಕ್ಷದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ದೆಹಲಿ ಮುಖಂಡರ ಮೇಲೆ ಒತ್ತಡ ಹೇರತೊಡಗಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿ ಸೂಕ್ತ ಅಭ್ಯರ್ಥಿಗೆ ಸಿಎಂ ಪಟ್ಟ ಕಟ್ಟಿ ವಿಧಾನಸಭೆ ಚುನಾವಣೆ ವರ್ಷದಲ್ಲಿ ಅರಗಿಸಿಕೊಳ್ಳುವುದು ಬಿಜೆಪಿಯ ಬಲಿಷ್ಠ ಹೈಕಮಾಂಡ್ಗೆ ಸಹ ಸುಲಭದ ನಿರ್ಧಾರದಂತೆ ಕಾಣುತ್ತಿಲ್ಲ.
ಇದನ್ನೂ ಓದಿ: ಗೃಹ ಸಚಿವ ನಿವಾಸ ಮುತ್ತಿಗೆ: ಪ್ರವೀಣ್ ಕೊಲೆ ಪ್ರಕರಣದ ಪ್ರಗತಿ ಬಗ್ಗೆ ಡಿಜಿಪಿ ಸೂದ್ಗೆ ಸಿಎಂ ತರಾಟೆ