ಬೆಂಗಳೂರು: ಜೆಡಿಎಸ್ ತೊರೆದು ಬಿಜೆಪಿ ಸೇರಲು ನಿರ್ಧರಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಇಂದು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಪಕ್ಷ ಸೇರ್ಪಡೆ ಸಮಾರಂಭ ದಿನಾಂಕದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಮಹತ್ವದ ಮಾತುಕತೆ ನಡೆಸಿದರು.
ಆರ್.ಟಿ.ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಬೊಮ್ಮಾಯಿ ಜೊತೆ ಮಾತುಕತೆ ನಡೆಸಿದರು. ನಿನ್ನೆಯೇ ಪರಿಷತ್ ಸ್ಥಾನ ಮತ್ತು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದ ಹೊರಟ್ಟಿ, ಸಿಎಂ ದೆಹಲಿಯಿಂದ ವಾಪಸ್ಸಾದ ಕಾರಣ ರಾಜೀನಾಮೆ ನೀಡಿರಲಿಲ್ಲ. ಹಾಗಾಗಿ, ಇಂದು ಬೆಳಗ್ಗೆಯೇ ಸಿಎಂ ಭೇಟಿಯಾಗಿ ಚರ್ಚೆ ನಡೆಸಿದರು. ಇಂದೇ ರಾಜೀನಾಮೆ ನೀಡುವ ಕುರಿತು ಮಾತುಕತೆ ನಡೆಸಿ ಮುಂದಿನ ರಾಜಕೀಯ ನಡೆಯ ಬಗ್ಗೆ ಸಮಾಲೋಚನೆ ನಡೆಸಿದರು.
ಪಕ್ಷ ಸೇರ್ಪಡೆಗೆ ರಾಜ್ಯ ಬಿಜೆಪಿ ಘಟಕದಿಂದ ಇನ್ನೂ ಯಾವುದೇ ದಿನಾಂಕ ನಿಗದಿಯಾಗಿಲ್ಲ, ಅಲ್ಲದೆ ಸಿಎಂ ದಾವೊಸ್ ಪ್ರವಾಸಕ್ಕೆ ಹೋದರೆ ಮತ್ತೆ ಪಕ್ಷ ಸೇರ್ಪಡೆ ವಿಳಂಬ ಆಗಬಹುದು.ಅಷ್ಟರಲ್ಲಿ ಪರಿಷತ್ ಚುನಾವಣೆಗೆ ನೋಟಿಫಿಕೇಶನ್ ಆದರೆ ಕಷ್ಟ ಆಗುತ್ತದೆ ಅನ್ನುವ ಕಾರಣಕ್ಕೆ ಮೇ 19 ರೊಳಗೆ ಸೇರ್ಪಡೆ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಿದರು. ಸಿಎಂ ವಿದೇಶ ಪ್ರವಾಸಕ್ಕೂ ಮೊದಲೇ ಹುಬ್ಬಳ್ಳಿಯಲ್ಲಿ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿ ಸೇರ್ಪಡೆ ಆಗುವ ಕುರಿತು ಮಾತುಕತೆ ನಡೆಸಿದರು. ಈ ಬಗ್ಗೆ ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಿ ಪಕ್ಷ ಸೇರ್ಪಡೆ ದಿನಾಂಕ ನಿಗದಿ ಮಾಡುವ ಭರವಸೆಯನ್ನು ಸಿಎಂ ನೀಡಿದರು ಎನ್ನಲಾಗಿದೆ.
ಈಗಾಗಲೇ ಜೆಡಿಎಸ್ ತೊರೆದು ಬಿಜೆಪಿ ಸೇರಲು ನಿರ್ಧರಿಸಿರುವ ಬಸವರಾಜ್ ಹೊರಟ್ಟಿ, ಅಮಿತ್ ಶಾ ಅವರನ್ನ ಬೆಂಗಳೂರು ಭೇಟಿ ವೇಳೆ ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ಇದೀಗ ಕಾರ್ಯಕ್ರಮದ ಮೂಲಕ ಪಕ್ಷ ಸೇರ್ಪಡೆ ಮಾತ್ರ ಬಾಕಿ ಇದೆ.
ಇದನ್ನೂ ಓದಿ: ಪ.ಬಂಗಾಳ ಸೇರಿ ಈಶಾನ್ಯದ 7 ರಾಜ್ಯಗಳಿಗೆ 35,000 ಸ್ವಚ್ಛಸೇವಕರ ನೇಮಕಕ್ಕೆ ಮುಂದಾದ ಆರ್‌ಎಸ್‌ಎಸ್