ಬೆಂಗಳೂರು: ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ತಾಯಿ-ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಬೆಮೆಲ್ ನಗರದ ನಿವಾಸಿಗಳಾದ ಹರೀಶ್ ಹಾಗೂ ತಾಯಿ ಆರ್ಯಾಂಬ ಮೃತರು. ಆರ್ಯಾಂಬ ಅವರ ಹಿರಿಮಗಳು ಶ್ರೀಲಕ್ಷ್ಮೀ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾನಸಿಕ ಅಸ್ವಸ್ಥೆಯಂತಿರುವ ಶ್ರೀಲಕ್ಷ್ಮಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಮೃತರ ಮನೆ ಮೇಲೆ ಬಾಡಿಗೆಗಿದ್ದ ಪ್ರವೀಣ್ ಕುಮಾರ್ ಎಂಬುವರಿಗೆ ಕೆಟ್ಟ ವಾಸನೆ ಬಡಿದಿದೆ. ಅನುಮಾನಗೊಂಡು ಕೂಡಲೇ ಮನೆ ಬಾಗಿಲು ತಟ್ಟಿದ್ದಾರೆ. ಯಾರು ಸಹ ಪ್ರತಿಕ್ರಿಯೆ ನೀಡದ ಹಿನ್ನೆಲೆ ಕೂಡಲೇ ಆರ್.ಆರ್. ನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಹರೀಶ್ ಹಾಗೂ ಆರ್ಯಾಂಬ ಇಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರೆ, ಶ್ರೀಲಕ್ಷ್ಮೀ ಪ್ರಜ್ಞೆ ಕಳೆದುಕೊಂಡು ಬಿದ್ದಿರುವುದು ಕಂಡು ಬಂದಿದೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹರೀಶ್ ಗೆ ಕೆಲ ದಿನಗಳ ಹಿಂದಷ್ಟೇ ಕೊರೊನಾ ಸೋಂಕು ತಗುಲಿತ್ತು. ಇದರಿಂದ ಹೋಮ್ ಕ್ವಾರಂಟೈನ್ ನಲ್ಲಿದ್ದ. ಈತನ ಜೊತೆ ತಾಯಿ ಹಾಗೂ ಅಕ್ಕನಿಗೂ ಪಾಸಿಟಿವ್ ಬಂದಿತ್ತಾ ಎಂಬುದರ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಇವರೆಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗ್ತಿದೆ. ಎರಡು ಮೂರು ದಿನಗಳ ಹಿಂದೆ ಹರೀಶ್ ಮೊಬೈಲ್ ನಿಂದ ಆ್ಯಂಬುಲೆನ್ಸ್ ಗಾಗಿ ಏಳೆಂಟು ಬಾರಿ ಕರೆ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಇದೇ ಕೊರಗಿನಲ್ಲಿ ತಾಯಿ-ಮಗ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.