ಬೆಂಗಳೂರು: ಆಜಾನ್-ಭಜನೆ ಸಂಘರ್ಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರ ನಿಯೋಗ ಸಿಎಂ ಬೊಮ್ಮಾಯಿ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಯು.ಟಿ.ಖಾದರ್, ಎನ್.ಎ.ಹ್ಯಾರೀಸ್ ಹಾಗು ನಜೀರ್ ಅಹಮ್ಮದ್ ನಿಯೋಗದಲ್ಲಿದ್ದರು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಡದಂತೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಸುಪ್ರೀಂಕೋರ್ಟ್ ಆದೇಶವನ್ನು ಮಸೀದಿಗಳು ಪಾಲಿಸಲಿದೆ ಎಂದೂ ಸಿಎಂಗೆ ಇದೇ ವೇಳೆ ಭರವಸೆ ನೀಡಿದ್ದಾರೆ.
ಬಳಿಕ ಮಾತನಾಡಿದ ಯು.ಟಿ.ಖಾದರ್, ರಾಜ್ಯದಲ್ಲಿ 99% ಜನ ಶಾಂತಿ ಸೌಹಾರ್ದತೆಯಿಂದ ಇದ್ದಾರೆ. ಕೆಲವು ಶಕ್ತಿಗಳು ಕೆಲವು ವಿಚಾರಗಳಿಗೆ ಅಶಾಂತಿ ಸೃಷ್ಟಿಸುತ್ತಿವೆ. ಸರ್ಕಾರ ಶಾಂತಿಯುತ, ಸಾಮರಸ್ಯ ಸಮಾಜ ನಿರ್ಮಿಸಬೇಕು ಎಂದರು.
ಶ್ರೀರಾಮಸೇನೆ ವಿರುದ್ಧ ಹೋರಾಟ ಇಲ್ಲ. ಕಾನೂನು ಹೋರಾಟವೂ ಮಾಡಲ್ಲ. ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಿಎಂ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಎಲ್ಲ ರೀತಿಯ ಶಬ್ದ ಮಾಲಿನ್ಯಗಳ ಕುರಿತಾಗಿ ಸರ್ಕಾರ ನಿಯಮ ಮಾಡಲಿ. ಅಂತಿಮವಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಕೋರ್ಟ್ ಆದೇಶದಂತೆ ನಿಯಮ ರೂಪಿಸಲಿ ಎಂದು ತಿಳಿಸಿದರು.
ಕಮಿಷನರ್ ಕಮಲ್ ಪಂತ್ ಭೇಟಿ: ಇದೇ ವೇಳೆ ಸಿಎಂ ಬೊಮ್ಮಾಯಿ ಅವರನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭೇಟಿ ಮಾಡಿ, ಆಜಾನ್ vs ಹನುಮಾನ್ ಚಾಲೀಸಾ ವಿಚಾರವಾಗಿ ಮಾಹಿತಿ ನೀಡಿದರು.
ಇದನ್ನೂ ಓದಿ: ದೇಗುಲಗಳಲ್ಲಿ ಭಜನೆ, ಮಂತ್ರ ಪಠಣ: ಬೆಂಗಳೂರಲ್ಲಿ ಹಿಂದೂ ಮುಖಂಡರು ಪೊಲೀಸ್ ವಶಕ್ಕೆ