ಬೆಂಗಳೂರು: ಕೋವಿಡ್-19 ಪರೀಕ್ಷೆ ಮಾಡಿಸಿ ಎಂದಿದಕ್ಕೆ ವೈದ್ಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಸಹಕಾರ ನಗರ ಬಳಿಯಿರುವ ನಾರಾಯಣ ಕ್ಲಿನಿಕ್ನಲ್ಲಿ ನಡೆದಿದೆ.
ಜಗನ್ನಾಥ್ ಹಲ್ಲೆಗೊಳಗಾದ ವೈದ್ಯರು. ಹೈಬಿಪಿ ಎಂದು ಆಸ್ಪತ್ರೆಗೆ ವ್ಯಕ್ತಿಯೋರ್ವ ಬಂದಿದ್ದ. ಈ ವೇಳೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವೈದ್ಯರು ಸೂಚಿಸಿದರು. ಟೆಸ್ಟ್ ಮಾಡದೇ ಇದ್ದರೆ ಚಿಕಿತ್ಸೆ ಕೊಡುವುದಕ್ಕೆ ಆಗಲ್ಲ. ಮೊದಲು ಕೋವಿಡ್ ಪರೀಕ್ಷೆ ಮಾಡಿಸುವುದು ಉತ್ತಮ ಎಂದಿದ್ದಾರೆ.
ಅದಕ್ಕೆ ರೋಗಿ ಕಡೆಯವರು ರೊಚ್ಚಿಗೆದ್ದು, ಡಾಕ್ಟರ್ ಮತ್ತು ಆ್ಯಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ವೈದ್ಯ ಡಾ. ಜಗನ್ನಾಥ್ ಮತ್ತು ಆ್ಯಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ. ಚಾಲಕನ ಹಲ್ಲು ಕೂಡ ಮುರಿದಿದೆ.
ಸದ್ಯ ವೈದ್ಯರ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿಗಳಿಗೆ ಶೋಧ ಮುಂದುವರೆದಿದೆ.