ಬೆಂಗಳೂರು: ಹಾಡಹಗಲೇ ಒಂಟಿ ಮಹಿಳೆಯ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಆರೋಪಿಗಳನ್ನ ಬಂಧನ ಮಾಡುವಲ್ಲಿ ಈಶಾನ್ಯ ವಿಭಾಗದ ಚಿಕ್ಕಜಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನು ಅಲಿಯಾಸ್ ಮನೋಜ್ ಕುಮಾರ್, ಕೀರ್ತಿ ಅಲಿಯಾಸ್ ಕೀರ್ತಿರಾಜ್ ಬಂಧಿತ ಆರೋಪಿಗಳು. ಚಿಕ್ಕ ಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಹಳದಿ ಬಣ್ಣದ ಡಿಯೋ ದ್ವಿಚಕ್ರ ವಾಹನದಲ್ಲಿ ಬಂದ ಖದೀಮರು, ಹಸುಗಳನ್ನು ಕರೆತರಲು ಹೋಗುತ್ತಿದ್ದ ಪುಷ್ಪಾ ಎಂಬುವವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಹಿಳೆ ನೀಡಿದ ದೂರಿನ ಮೇರೆಗೆ ಚಿಕ್ಕಜಾಲ ಇನ್ಸ್ಪೆಕ್ಟರ್ ಯಶ್ವಂತ್ ಬಿ.ಎಸ್ ತಂಡ, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ 113 ಗ್ರಾಂ ತೂಕದ ಮಾಂಗಲ್ಯ ಸರ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ಚಿಕ್ಕ ಜಾಲ, ದೇವನಹಳ್ಳಿ, ಯಲಹಂಕ ಬಳಿ ಈ ರೀತಿ ಕೃತ್ಯ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದು, ತನಿಖೆ ಮುಂದುವರೆದಿದೆ.