ಬೆಂಗಳೂರು: ಲಾಕ್ಡೌನ್ ಸಂದರ್ಭವನ್ನು ಬಂಡವಾಳ ಮಾಡಿಕೊಂಡ ಕೆಲ ವರ್ತಕರು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದರು. ಆದರೆ, ಈಗ ಅನ್ಲಾಕ್ ಆದ ನಂತರ ಅಗತ್ಯ ವಸ್ತುಗಳ ಬೆಲೆ ಯಥಾ ಸ್ಥಿತಿಗೆ ಬಂದಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.
ಕೊರೊನಾ ಪ್ರೇರಿತ ಲಾಕ್ಡೌನ್ನಿಂದ ಯಾವುದೇ ದಿನಬಳಕೆ ಸಾಮಗ್ರಿಗಳು ಸರಿಯಾಗಿ ಸಿಗದೇ, ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಅನಿವಾರ್ಯತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಅಂಗಡಿಯವರು, ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರುವ ಮೂಲಕ ವಸೂಲಿ ದಂಧೆಗಿಳಿದಿದ್ದರು.
ಆ ಸಮಯದಲ್ಲಿ ದೊಡ್ಡ ಅಂಗಡಿಗಳನ್ನು ಹಾಗೂ ಮಳಿಗೆಗಳನ್ನು ಮುಚ್ಚಿಸಲಾಗಿತ್ತು. ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿ, ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳವರು, ಸಂಕಷ್ಟದ ಸಂದರ್ಭವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದರು. ಅಕ್ಕಿ, ಬೇಳೆ ಮೊದಲಾದ ಕಾಳುಗಳು, ಅಡುಗೆ ಎಣ್ಣೆ, ಈರುಳ್ಳಿ, ತೆಂಗಿನಕಾಯಿ ಮತ್ತಿತರ ಸಾಮಗ್ರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಯಥಾ ಸ್ಥಿತಿಗೆ ಬಂದಿದ್ದು, ಗ್ರಾಹಕರು ನಿರಾಳರಾಗಿದ್ದಾರೆ.
ಈ ಮೊದಲು ಸಗಟು ಮಾರುಕಟ್ಟೆಯಲ್ಲಿ 50 ರೂಪಾಯಿಯ ಅಕ್ಕಿಯ ಬೆಲೆ 100 ರೂ. ಆಗಿತ್ತು. ಹೀಗೆ ಬೇಳೆ, ಎಣ್ಣೆ ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಅನಿವಾರ್ಯ ಕಾರಣದಿಂದ ಜನರು ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದರು.
ಪ್ರಮುಖವಾಗಿ ಲಾಕ್ಡೌನ್ ಘೋಷಣೆ ಬಳಿಕ ವಾಹನಗಳ ಸೌಕರ್ಯವಿಲ್ಲದೆ, ಅಗತ್ಯ ವಸ್ತುಗಳ ಪೂರೈಕೆ ಕಡಿಮೆಯಾಗಿತ್ತು. ಇದರಿಂದ ಖರೀದಿಸಲು ಹೋದವರಿಗೆ ಅಂಗಡಿಯವರು ದುಬಾರಿ ಬೆಲೆಯ ಬರೆ ಎಳೆಯುತ್ತಿದ್ದರು. ಸದ್ಯ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿದ್ದು, ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಸುರಕ್ಷತಾ ಕ್ರಮ ಕೈಗೊಂಡು ಮನೆಯಿಂದ ಜನರು ಹೊರ ಬರುತ್ತಿದ್ದು, ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿರುವುದಕ್ಕೆ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.
ಆದರೆ, ಜನರ ಬಳಿ ದುಡ್ಡು ಕಡಿಮೆಯಾಗಿದ್ದರಿಂದ ಕೊಂಚ ವ್ಯಾಪಾರ ಕಡಿಮೆಯಾಗಿದೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆ ಸಾಮಾನ್ಯ ದರಗಳಿಗೆ ಬಂದಿರುವುದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ.