ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ಸಹಕಾರ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಮನವಿ ಮಾಡಿದ್ರೂ ಕ್ಯಾರೇ ಅಂತಿರಲಿಲ್ಲ. ಗಂಟೆಗಟ್ಟಲೆ ಸಭೆಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ. ಈಗ ಸರ್ಕಾರ ದಂಡಂ ದಶಗುಣಂ ತಂತ್ರ ಫಲಿಸಿದೆ.
ಮನವಿ ಮಾಡಿದ್ದೂ ಆಯ್ತು, ಸೂಚನೆ ನೀಡಿದ್ದೂ ಆಯ್ತು. ಯಾವುದಕ್ಕೂ ಗಮನ ಕೊಡದ ಕೆಲ ಖಾಸಗಿ ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ದಾಖಲಾತಿ ಪಡೆದು ಚಿಕಿತ್ಸೆ ನೀಡುವಂತೆ ಹಾಗೂ ಆಸ್ಪತ್ರೆಯಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಕಾಯ್ದಿರಿಸಿ, ಕಾಯ್ದಿರಿಸಲಾಗಿರುವ ಹಾಸಿಗೆಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸರ್ಕಾರ ಸೂಚಿಸಿದಂತೆ ಸೋಂಕಿತರಿಗೆ ಚಿಕಿತ್ಸೆ ಸಿಗುತ್ತಿಲ್ಲವೆಂದು ದೂರುಗಳು ಬಂದಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ನಗರದ ಎರಡು ಪ್ರತಿಷ್ಠಿತ ಆಸ್ಪತ್ರೆಗಳ ಒಪಿಡಿ ಸೇವೆಯನ್ನ 48 ಗಂಟೆಗಳ ಕಾಲ ಆರೋಗ್ಯ ಅಧಿಕಾರಿಗಳು ಬಂದ್ ಮಾಡಿದ್ದರು. ಇದೀಗ ಸರ್ಕಾರದ ದಂಡಂ ದಶಗುಣಂ ಆದೇಶಕ್ಕೆ ಅಪೋಲೋ ಆಸ್ಪತ್ರೆ ಪಾಠ ಕಲಿತಿದೆ. ಜಯನಗರದ ಅಪೋಲೋ ಆಸ್ಪತ್ರೆ ಈಗ ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದೆ. ಈಗ ಸರ್ಕಾರದ ನೋಟಿಸ್ ಹಾಗೂ ಒಪಿಡಿ ಬಂದ್ ಆದೇಶಕ್ಕೆ ಎಚ್ಚೆತ್ತಿದ್ದು, 100 ಹಾಸಿಗೆ ಸೌಲಭ್ಯ ಆಸ್ಪತ್ರೆಯಲ್ಲಿ ಲಭ್ಯವಿರಲಿದೆ.