ಬೆಂಗಳೂರು: ಬೆಂಗಳೂರು ದಕ್ಷಿಣ ನೂರಾರು ಕಲಾತಂಡ, ರಂಗತಂಡಗಳ ನೆಲೆ. ಆದ್ರೆ ಕಲಾ ಪ್ರದರ್ಶನಕ್ಕೆ, ತಾಲೀಮುಗಳಿಗೆ ಜಾಗದ ಕೊರತೆ ಎದುರಿಸುತ್ತಿದ್ದ ಕಲಾವಿದರಿಗೆ ಸಿಹಿಸುದ್ದಿ ಇಲ್ಲಿದೆ.
ಬಸವನಗುಡಿಯ ಎನ್.ಆರ್.ಕಾಲೊನಿಯಲ್ಲಿ ಬಿಬಿಎಂಪಿ ವತಿಯಿಂದ 'ಡಾ.ಸಿ ಅಶ್ವತ್ಥ್ ಕಲಾಭವನ' ನಿರ್ಮಿಸಲಾಗಿದ್ದು, ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ₹ 2.65 ಕೋಟಿ ವೆಚ್ಚದಲ್ಲಿ ಭವನ ಕಟ್ಟಲಾಗಿದೆ.
ಕಟ್ಟಡದ ನೆಲ ಮಹಡಿಯಲ್ಲಿ ವಾರ್ಡ್ ಕಚೇರಿ, ಮೊದಲ ಮಹಡಿಯಲ್ಲಿ ಕಲಾಭವನ ಇದೆ. 185 ಜನರ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ₹10 ಸಾವಿರ ಬಾಡಿಗೆ ನಿಗದಿಪಡಿಸುವ ಸಾಧ್ಯತೆಯಿದ್ದು, ಈ ಬಗ್ಗೆ ಮುಂದಿನ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ತಿಳಿಸಿದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಇದು ಅದ್ಭುತ ಕಲಾಭವನ. ಬಿಬಿಎಂಪಿಯಿಂದ ಈ ಉತ್ತಮ ಕಲಾಭವನ ನಿರ್ಮಿಸಿರುವುದು ಸಂತೋಷದ ವಿಚಾರ. ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ವಾರ್ಡ್ ಮತ್ತು ಹೆಲ್ತ್ ಆಫೀಸ್ ಕೂಡಾ ಇರಲಿದೆ ಎಂದರು.