ಬೆಂಗಳೂರು: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಶೇಷ ಆಯುಕ್ತ ಮಂಜುನಾಥ್ ಪ್ರಸಾದ್ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ತದನಂತರ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶೇಷ ಆಯುಕ್ತ ಮಂಜುನಾಥ್ ಪ್ರಸಾದ್, ಡಾ. ಬಿ.ಆರ್. ಅಂಬೇಡ್ಕರ್ ಅವರು ಕಷ್ಟಗಳ ನಡುವೆಯೇ ತಮ್ಮ ಶಿಕ್ಷಣವನ್ನು ವಿದೇಶದಲ್ಲಿ ಮುಗಿಸಿ, ಭಾರತಕ್ಕೆ ಬಂದಾಗ ತಮ್ಮನ್ನು ತಾವು ಹೋರಾಟದಲ್ಲಿ ತೊಡಗಿಸಿಕೊಂಡರು. ಜಾತಿ ಪದ್ಧತಿ, ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದರು ಎಂದು ಸಂವಿಧಾನ ಶಿಲ್ಪಿಯ ವಿಚಾರಧಾರೆಗಳನ್ನು ಹಂಚಿಕೊಂಡರು.
ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ನಾವು ಜನಾಂಗದ ಅಭಿವೃದ್ಧಿ ಕಡೆ ಗಮನ ಕೊಡುವುದನ್ನು ಮರೆತು ಬಿಟ್ಟಿದ್ದೇವೆ. ಅಂಬೇಡ್ಕರ್ ಯಾವುದೇ ಒಂದು ಸಮುದಾಯದಕ್ಕೆ ಸೇರಿದವರಲ್ಲ, ಬದಲಿಗೆ ದೇಶದ ಆಸ್ತಿ ಎಂದರು.