ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ರಾಜ್ಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮದ ವಾಸನೆ ಮೂಡಲಾರಂಭಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆ ಹಿರಿಯ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ವಾಮ ಮಾರ್ಗದಲ್ಲಿ ನೇಮಕ ಆದೇಶ ನೀಡಿ ಅಕ್ರಮ ಎಸಗಿರುವ ಪ್ರಕರಣವೊಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಬೆಳಕಿಗೆ ತಂದಿದೆ.
ತುಮಕೂರು ಜಿಲ್ಲೆಯ ಕುಣಿಗಲ್, ಗುಬ್ಬಿ, ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧೆಡೆ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಹೆಸರು ಹಾಗೂ ಹೇಗೆಲ್ಲಾ ನಡೆಯುತ್ತೆ ಎಂಬುದನ್ನು ಎಳೆ ಎಳೆಯಾಗಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹೇಳಿದೆ.
ನೇಮಕವಾದ ಶಿಕ್ಷಕರು ಯಾರು? : 2014-15 ನೇ ಸಾಲಿನಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದ್ದು, ನವೀನ್ ಕುಮಾರ್ ಬಿ ಎನ್, ಸಿದ್ರಾಮಪ್ಪ ಬಿರಾದಾರ್, ಮಹೇಶ್ ಸುಸಲಾದಿ, ದೇವೆಂದ್ರ ನಾಯಕ್ ವಾಮ ಮಾರ್ಗದಲ್ಲಿ ನೇಮಕವಾದ ಶಿಕ್ಷಕರು. ಈ ಬಗ್ಗೆ ಸಿಎಂ ಬೊಮ್ಮಾಯಿ, ಸಚಿವ ನಾಗೇಶ್, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಇಲ್ಲಿಯವರೆಗೂ ಯಾವುದೇ ತನಿಖೆ ಆರಂಭವಾಗಿಲ್ಲ.
15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ: ಈ ವರ್ಷದ ಮೇ ತಿಂಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಪರೀಕ್ಷೆ ಜರುಗಿದೆ. ಅದರ ರಿಸಲ್ಟ್ ಇನ್ನೂ ಬರಬೇಕಿದೆ. ಅದರ ನಡುವೆ ಈ ರೀತಿಯ ಆರೋಪಗಳು ಪ್ರಾಮಾಣಿಕ ಅಭ್ಯರ್ಥಿಗಳಲ್ಲಿ ಭಯವನ್ನು ಸೃಷ್ಟಿಸುವಂತೆ ಮಾಡಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡುವಂತೆ ಕೇಂದ್ರದ ಬಳಿ ಕೋರಿಕೆ: ವಿ.ಸೋಮಣ್ಣ