ಬೆಂಗಳೂರು: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು 'ದಾಸೋಹ ದಿನ'ವನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.
12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ 'ಕಾಯಕವೇ ಕೈಲಾಸ' ಮತ್ತು 'ನಿತ್ಯ ದಾಸೋಹ' ತತ್ವದ ಕೈಂಕರ್ಯದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು ತೊಡಗಿಸಿಕೊಂಡಿದ್ದರು. 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು, ಅಂದಿನಿಂದ ನಿರಂತರವಾಗಿ ಮಠ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು. ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯೆ, ದಾಸೋಹದ ಜೊತೆಗೆ ವಸತಿ ಸೌಕರ್ಯ ಕಲ್ಪಿಸಿ 'ತ್ರಿವಿಧ ದಾಸೋಹಿ'ಗಳಾಗಿದ್ದರು. ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಅಪಾರ ಭಕ್ತವೃಂದವನ್ನು ಹೊಂದಿದ್ದರು.
![All India Veerashaiva Mahasabha appeal to cm](https://etvbharatimages.akamaized.net/etvbharat/prod-images/10305875_thumbn.jpg)
ಶ್ರೀಗಳ ನಿಷ್ಕಲ್ಮಷ ಸೇವೆಯನ್ನು ಪರಿಗಣಿಸಿ, ಕರ್ನಾಟಕ ವಿಶ್ವವಿದ್ಯಾಲಯವು 'ಗೌರವ ಡಾಕ್ಟರೇಟ್' ನೀಡಿತ್ತು. ಪೂಜ್ಯಶ್ರೀಗಳವರ 100ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ 'ಕರ್ನಾಟಕ ರತ್ನ' ನೀಡಿ ಗೌರವಿಸಿತ್ತು.
2015ರಲ್ಲಿ ಭಾರತ ಸರ್ಕಾರವು 'ಪದ್ಮಭೂಷಣ ಪ್ರಶಸ್ತಿ' ನೀಡಿ ಗೌರವಿಸಿತ್ತು. ಶ್ರೀಗಳು ಲಿಂಗೈಕ್ಯರಾಗಿ ಜನವರಿ 21ಕ್ಕೆ 2 ವರ್ಷಗಳು ಪೂರೈಸಲಿದ್ದು, ಶ್ರೀಗಳು ಲಿಂಗೈಕ್ಯರಾದ ದಿನವನ್ನು 'ದಾಸೋಹ ದಿನ'ವನ್ನಾಗಿ ಆಚರಿಸುವುದು ಭಕ್ತರ ಇಚ್ಚೆಯಾಗಿದೆ. ಆದ್ದರಿಂದ ಡಾ. ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವನ್ನಾಗಿ ಕರ್ನಾಟಕ ಸರ್ಕಾರ ಘೋಷಿಸಿ, ಅಂದು ಶ್ರೀಗಳ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳನ್ನು ಸ್ಮರಿಸುವಂತೆ ಪತ್ರದ ಮೂಲಕ ಮನವಿ ಮಾಡಿದೆ.
![all-india-veerashaiva-mahasabha-appeal-to-cm](https://etvbharatimages.akamaized.net/etvbharat/prod-images/10305875_news.jpg)
ಬೆಂಗಳೂರು ನಗರ ಜಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಮನವಿ:
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕೂಡ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು 'ದಾಸೋಹ ದಿನ'ವನ್ನಾಗಿ ಘೋಷಿಸುವಂತೆ ಮನವಿ ಮಾಡಿದೆ. ಶ್ರೀಗಳು ಅನ್ನದಾಸೋಹ, ವಿದ್ಯಾದಾಸೋಹ, ಅಕ್ಷರ ದಾಸೋಹಗಳ ಮೂಲಕ ಕೋಟ್ಯಂತರ ಬಡಮಕ್ಕಳಿಗೆ ಸಾಕ್ಷಾತ್ ದೇವರಾಗಿದ್ದರು. ಅವರ ಪುಣ್ಯತಿಥಿ ಜ. 21ನ್ನು ದಾಸೋಹದ ದಿನವನ್ನಾಗಿ ಆಚರಿಸುವ ಮೂಲಕ ಗೌರವ ಸಲ್ಲಿಸಬಹುದಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.