ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಫಿಸಿಕಲ್ ಕೋರ್ಟ್ ಕಲಾಪಗಳು ನಿಂತು ಹೋಗಿರುವ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನೆರವಾಗುವಂತೆ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲಾ ಕೋರ್ಟ್ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಫಿಸಿಕಲ್ ಕೋರ್ಟ್ ನಡೆಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒತ್ತಾಯಿಸಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ್, ರಾಜ್ಯದಲ್ಲಿ ವಕೀಲರ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಕೊರೊನಾ ಬಂದ ಬಳಿಕ ಸುರಕ್ಷತೆ ದೃಷ್ಟಿಯಿಂದ ಕೋರ್ಟ್ ಕಲಾಪಗಳನ್ನು ಸೀಮಿತವಾಗಿ ಆನ್ಲೈನ್ ಮೂಲಕ ನಡೆಸಲಾಗುತ್ತಿದೆ. ಇದು ವಕೀಲರಷ್ಟೇ ಅಲ್ಲದೇ ಕಕ್ಷಿದಾರರಿಗೂ ಸಮಸ್ಯೆಯಾಗಿದೆ. ಹೀಗಾಗಿ ಶೀಘ್ರವೇ ಫಿಸಿಕಲ್ ಕಲಾಪ ಆರಂಭಿಸುವಂತೆ ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ಪರಿಷತ್ ನಿರ್ಣಯ:
ವಕೀಲರ ಹಿತದೃಷ್ಟಿಯಿಂದ ಪೂರ್ಣ ಪ್ರಮಾಣದ ಕಲಾಪ ನಡೆಸಲು ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಲು ರಾಜ್ಯ ವಕೀಲರ ಪರಿಷತ್ತು ಈಗಾಗಲೇ ನಿರ್ಣಯ ಕೈಗೊಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಪರಿಷತ್ತಿನ ಅಧ್ಯಕ್ಷರು ಹಾಗೂ ಸದಸ್ಯರು ಮೂರ್ನಾಲ್ಕು ಸಭೆ ನಡೆಸಿ, ರಾಜ್ಯದೆಲ್ಲೆಡೆ ಪೂರ್ಣ ಪ್ರಮಾಣದಲ್ಲಿ ಫಿಸಿಕಲ್ ಕೋರ್ಟ್ ಆರಂಭಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಲು ನಿರ್ಣಯ ಕೈಗೊಂಡು, ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೂ ತರಲಾಗಿದೆ. ಹಾಗೆಯೇ ಫಿಸಿಕಲ್ ಕೋರ್ಟ್ ಆರಂಭವಾದಲ್ಲಿ ವಕೀಲರ ಸುರಕ್ಷತೆಗೆ ಸಂಬಂಧಿಸಿದಂತೆ ಒಟ್ಟು 26 ಸಲಹೆಗಳನ್ನು ಪರಿಷತ್ತು ಸಿಜೆ ಅವರಿಗೆ ನೀಡಿದೆ.
ಸಿಜೆ ಭರವಸೆ: ವಕೀಲರ ಪರಿಷತ್ತಿನ ನಿರ್ಣಯವನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರು ಪೂರ್ಣ ಪ್ರಮಾಣದಲ್ಲಿ ಕೋರ್ಟ್ಗಳನ್ನು ನಡೆಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕೋರ್ಟ್ಗಳಲ್ಲಿ ಹಂತಹಂತವಾಗಿ ಫಿಸಿಕಲ್ ಕಲಾಪ ಆರಂಭಿಸಲು ಆಲೋಚಿಸಿದ್ದಾರೆ. ಅದರಂತೆ ವಕೀಲರು ನೂರಕ್ಕಿಂತ ಕಡಿಮೆ ಇರುವಂತ ಕಡೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗಿದೆ. ಇನ್ನು ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳಲ್ಲಿಯೂ ಮಾರ್ಗಸೂಚಿ ಪರಿಷ್ಕರಿಸಿ ಫಿಸಿಕಲ್ ಕೋರ್ಟ್ ಆರಂಭಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಪರಿಗಣಿಸಿ ಫಿಸಿಕಲ್ ಕೋರ್ಟ್ ಆರಂಭಿಸಲು ಸಿಜೆ ಸೂಚಿಸಲಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ನಲ್ಲಿ ಫಿಸಿಕಲ್ ಕಲಾಪ: ಈ ವಿಚಾರವಾಗಿ ಪರಿಷತ್ತಿನ ಅಧ್ಯಕ್ಷರು ವಿವರಿಸಿ, ನನಗೆ ಮಾಹಿತಿ ಇರುವಂತೆ ಅಕ್ಟೋಬರ್ ತಿಂಗಳಲ್ಲಿ ಎಲ್ಲಾ ಕೋರ್ಟ್ಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವ ಸಾಧ್ಯತೆ ಇದೆ. ಕೋವಿಡ್ ಪರಿಣಾಮವಾಗಿ ಕಳೆದ ಆರು ತಿಂಗಳಿಂದ ವಕೀಲರಷ್ಟೇ ಅಲ್ಲದೇ, ಕಕ್ಷೀದಾರರಿಗೂ ಸಮಸ್ಯೆಯಾಗಿದೆ. ಈ ವಿಚಾರವನ್ನೂ ಸಿಜೆ ಗಮನಕ್ಕೆ ತಂದಿದ್ದೇವೆ. ನ್ಯಾಯದಾನ ವಿಳಂಬವಾಗಬಾರದು ಎಂಬ ನಿಟ್ಟಿನಲ್ಲಿ ಸಿಜೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಸುರಕ್ಷತೆ ಕಾರಣಕ್ಕಾಗಿ ಪೂರ್ಣಪ್ರಮಾಣದ ಫಿಸಿಕಲ್ ಕಲಾಪ ವಿಳಂಬವಾಗುತ್ತಿದೆ ಎನ್ನುತ್ತಾರೆ.
ವಕೀಲರಿಗೆ ಪರಿಷತ್ ನೆರವು : ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಪರಿಷತ್ತಿನಿಂದ ಯಾವೆಲ್ಲ ನೆರವು ನೀಡಿದ್ದೀರಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅಧ್ಯಕ್ಷರು, ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ವಕೀಲರಿದ್ದಾರೆ. ರಾಜ್ಯ ಸರ್ಕಾರ ನೀಡಿದ 5 ಕೋಟಿ ರೂಪಾಯಿ ಹಣದಲ್ಲಿ ಒಟ್ಟು 20 ಸಾವಿರ ವಕೀಲರಿಗೆ ತಲಾ 1 ಲಕ್ಷ ರೂಪಾಯಿಯ ಕೋವಿಡ್ ಸುರಕ್ಷಾ ವಿಮೆ ಪಾಲಿಸಿ ನೀಡಿದ್ದೇವೆ.
ಆರ್ಥಿಕ ಸಂಕಷ್ಟದಲ್ಲಿರುವ 5 ಸಾವಿರ ವಕೀಲರಿಗೆ ತಲಾ 5 ಸಾವಿರ ರೂಪಾಯಿ ನೆರವು ಕೊಟ್ಟಿದ್ದೇವೆ. ಇನ್ನೂ 9 ಸಾವಿರ ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಪರಿಷತ್ತು ತನ್ನ ಸೀಮಿತ ನಿಧಿಯಲ್ಲೇ ವಕೀಲರಿಗೆ ನೆರವು ನೀಡುವ ಎಲ್ಲಾ ಪ್ರಯತ್ನ ಮಾಡಿದೆ ಎನ್ನುತ್ತಾರೆ.