ಬೆಂಗಳೂರು : ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕ/ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಓಂಕಾರ್ ರೇವಣ್ಣಪ್ಪ ಶೇರಿಕಾರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಸಿಂಧುತ್ವ ಪ್ರಮಾಣಪತ್ರ ನೀಡುವುದರಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಹಾಗೂ ಇತರ ಸದಸ್ಯರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಆತ್ಮಹತ್ಯೆ ಮಾಡಿಕೊಂಡಿರುವ ಓಂಕಾರ್ ಅವರ ಕುಟುಂಬದವರಿಗೆ ಮಾನವೀಯತೆ ನೆಲೆಯಲ್ಲಿ ಪರಿಹಾರ ಒದಗಿಸಲಾಗುವುದು ಹಾಗೂ ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಸಿಂಧುತ್ವ ಪ್ರಮಾಣಪತ್ರ ನೀಡುವುದರಲ್ಲಿ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲಾಗುವುದಾಗಿ ಹೇಳಿದ್ದಾರೆ. ಬಾಲ್ಕಿ ಡಿಪೋ ದಲ್ಲಿ ಚಾಲಕ/ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಓಂಕಾರ್ ರೇವಣ್ಣಪ್ಪ ಶೇರಿಕಾರ್ ಸಿಂಧುತ್ವ ಪ್ರಮಾಣಪತ್ರ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಎಸ್ಟಿಗೆ ಸೇರಿದ 12 ಜಾತಿಗಳಿಗೆ ಸಿಂಧುತ್ವ ಪ್ರಮಾಣಪತ್ರ ನೀಡಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಪರಿಶೀಲನೆ ಮಾಡಲು ಆದೇಶಿಸಲಾಗಿದೆ. ಮಹಾರಾಷ್ಟ್ರದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಆದೇಶವಿದೆ. ಗೋಂಡಾ ಸಮುದಾಯ ವಿಶೇಷ ಬುಡಕಟ್ಟು ಸಮುದಾಯವಾಗಿದೆ. ಸಿಂಧುತ್ವ ಪ್ರಮಾಣ ಪತ್ರದ ಸಮಸ್ಯೆ ಕುರಿತಂತೆ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮೊದಲಿನ ಪರಿಸ್ಥಿತಿ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗುವುದು. ಸಿಂಧುತ್ವ ಪ್ರಮಾಣ ಪತ್ರದ ಬಗ್ಗೆ ದೂರುಗಳಿದ್ದರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಲಾಗುತ್ತಿತ್ತು. ಈಗ ಎಲ್ಲ 12 ಜಾತಿಗಳ ವಿಚಾರ ಪರಿಶೀಲನೆಗೆ ಹೋಗುತ್ತಿದೆ. ಈ ವಿಚಾರದ ಬಗ್ಗೆ ಇಂದೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ.
ಸರ್ಕಾರ 16/01/2021 ರಂದು ಸಿಂಧುತ್ವ ಪ್ರಮಾಣಪತ್ರ ಪಡೆಯಲು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳು ವರದಿ ಪಡೆದು ಅದನ್ನು ಪರಿಶೀಲನೆ ಮಾಡಿ, ನಂತರ ಪ್ರಮಾಣಪತ್ರ ನೀಡಬೇಕು ಎಂದು ಆದೇಶ ಮಾಡಿದೆ. ಇದಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ವರದಿ ಪಡೆದು ನೀಡಲಾಗುತ್ತಿತ್ತು. ಈ ಸಿಆರ್‌ಇ ಸೆಲ್ ಜನರಿಗೆ ಕಿರುಕುಳ ನೀಡುತ್ತಿದೆ ಎಂಬ ಆರೋಪ ಬಹಳ ಹಿಂದಿನಿಂದಲೂ ಇತ್ತು. ಸರ್ಕಾರ ಮತ್ತೆ ಅವರಿಗೆ ಅಧಿಕಾರ ನೀಡಿ ಜನರನ್ನು ಇನ್ನಷ್ಟು ಸಮಸ್ಯೆಗೆ ನೂಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
![Action will be taken for the issue of validity certificate](https://etvbharatimages.akamaized.net/etvbharat/prod-images/kn-bng-05-session-zero-hour-cm-ph-7208083_14032022165819_1403f_1647257299_416.jpg)
ಹಾಗಾಗಿ ಸರ್ಕಾರ 16/01/2021 ರ ಆದೇಶವನ್ನು ಹಿಂಪಡೆಯಬೇಕು. ಗೊಂಡ, ರಾಜಗೊಂಡ ಸಮುದಾಯದವರು ಎಸ್.ಟಿ ಮೀಸಲಾತಿ ಅಡಿ ಬರುತ್ತಾರೆ, ಕೋಲಿ, ಟೋಕ್ರೆ ಈ ಸಮಾಜದ ಜನರಿಗೂ ಮೀಸಲಾತಿ ಪತ್ರ ಸಿಗಬೇಕು. ಈಗ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ ಓಂಕಾರ್ ರೇವಣಪ್ಪ ಅವರ ಕುಟುಂಬದವರಿಗೆ ಪರಿಹಾರ ಮತ್ತು ಸರ್ಕಾರಿ ನೌಕರಿ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದ್ದಾರೆ.
ಸಿಂಧುತ್ವ ಪತ್ರವನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಪಡೆಯಬೇಕು ಎಂದು ಹೇಳಿದ್ದು, ಇದು ತೊಂದರೆಯಾಗುತ್ತಿದೆ. ಮೊದಲು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯೇ ಇತ್ಯರ್ಥ ಮಾಡಿ ಪ್ರಮಾಣಪತ್ರ ಕೊಡುತಿತ್ತು. ಈ ಆದೇಶವನ್ನು ವಾಪಸ್ ಪಡೆದು ಮೊದಲಿನ ರೀತಿಯಲ್ಲೇ ಕೊಡುವಂತೆ ಒತ್ತಾಯಿಸಿದ್ದಾರೆ.
ಓದಿ : ನೇತಾಜಿ 125ನೇ ಜನ್ಮ ದಿನೋತ್ಸವ: ಪ್ರಧಾನಿ ಅಧ್ಯಕ್ಷತೆಯಲ್ಲಿ ದೇವೇಗೌಡ, ಡಾ.ಸಿಂಗ್ ಸೇರಿ 82 ಸದಸ್ಯರ ಸಮಿತಿ ರಚನೆ