ಬೆಂಗಳೂರು: ದಂಡ ವಿಧಿಸಿದ್ದಕ್ಕೆ ಸಂಚಾರಿ ಪೊಲೀಸಪ್ಪನ ವಸ್ತುಗಳನ್ನೇ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಅಶೋಕ್ ಗಜರೆ ಎಂಬಾತ ಬೈಕ್ ನಿಲ್ಲಿಸಿದ್ದನು. ಹೀಗಾಗಿ ಠಾಣೆಯ ಪೇದೆ ಮುಲ್ಲ ಮುಸ್ತಫಾ, ಬೈಕ್ ಸವಾರನಿಗೆ ದಂಡ ಹಾಕಿದ್ದನು. ಇದರಿಂದ ಕೋಪಗೊಂಡಿದ್ದ ಅಶೋಕ್, ವೈ ಜಿ ಪಾಳ್ಯ ಪೊಲೀಸ್ ಕ್ವಾಟ್ರಸ್ ವರೆಗೂ ಪೇದೆಯನ್ನ ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಳಿಕ ಕ್ವಾಟ್ರಸ್ ಹೊರಗಡೆ ನಿಲ್ಲಿಸಿದ್ದ ಪೇದೆಯ ಬೈಕ್ನಲ್ಲಿದ್ದ ರೇನ್ ಕೋಟ್, ಟ್ಯಾಬ್ ಹಾಗೂ ಮಾಸ್ಕ್ ಕದ್ದು ಪರಾರಿಯಾಗಿದ್ದಾನೆ.
ಈ ವೇಳೆ ಹೊರಗಡೆ ಶಬ್ದ ಕೇಳಿ ಹೊರ ಬಂದ ಪೇದೆಗೆ ಅಶೋಕ್, ನಂಗೆ ಫೈನ್ ಹಾಕ್ತಿಯಾ...? ನಾನ್ಯಾರು ಅಂತ ನಿಂಗೆ ತೋರಿಸ್ತೀನಿ ಎಂದು ಅವಾಜ್ ಹಾಕಿ ಪರಾರಿಯಾಗಿದ್ದಾನೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಮುಂದುವರೆದಿದೆ.