ಬೆಂಗಳೂರು: ಮಂಗಳೂರಿನಲ್ಲಿ ನಡೆದ ಘಟನೆ ಖಂಡನೀಯವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ವರದಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಗುಪ್ತಚರ ಎಡಿಜಿಪಿ ಕಮಲ್ ಪಂತ್ ಸಮ್ಮುಖದಲ್ಲಿಯೇ ಮುಸ್ಲಿಂ ಮುಖಂಡರ ನಿಯೋಗದ ಸಭೆ ನಡೆಸಿ, ಮಂಗಳೂರು ಘಟನೆ ಬಗ್ಗೆ ವಿವರಣೆ ಪಡೆದರು. ಸರ್ಕಾರ ನಿಮ್ಮ ಜೊತೆ ಇದೆ, ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಿದ್ದೇವೆ. ಸಹಕಾರ ನೀಡಿ, ನಾಳಿನ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಸಿಎಂ ಮನವಿಗೆ ಸ್ಪಂದಿಸಿದ ನಿಯೋಗ, ನಾಳಿನ ಪ್ರತಿಭಟನೆ ಕೈಬಿಡುವ ಭರವಸೆ ನೀಡಿತು.
ಸಭೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಸ್ಲಿಂ ಬಂಧುಗಳ ಜೊತೆ ಸಮಾಲೋಚನೆ ಮಾಡಿದ್ದೇವೆ. ನಾವು ಹಿಂದು-ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ. ಕೇಂದ್ರ ಸರ್ಕಾರ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಯಾವುದೇ ಧರ್ಮಕ್ಕೆ ಧಕ್ಕೆ ಮಾಡಲ್ಲ. ಪ್ರಚೋಧನಕಾರಿ ಹೇಳಿಕೆಗೆ ಕಿವಿಗೊಡದೆ ಶಾಂತಿ ರೀತಿಯಿಂದ ಇರೋಣ. ಯಾವುದೇ ಆತಂಕಪಡುವ ಅಗತ್ಯ ಇಲ್ಲ, ಕರ್ನಾಟಕದ ಮುಸ್ಲಿಂಮರಿಗೆ ಯಾವುದೇ ತೊಂದರೆ ಆಗಲ್ಲವೆಂದು ಅಭಯ ನೀಡಿದ್ರು.
ಮುಸ್ಲಿಂರ ಜೊತೆ ಕರ್ನಾಟಕ ಸರ್ಕಾರ ಇದೆ. ವದಂತಿಗೆ ಕಿವಿಗೊಡಬೇಡಿ, ಅಶಾಂತಿಗೆ ಅವಕಾಶ ಕೊಡಬೇಡಿ. ಯಾವುದೇ ಹೋರಾಟಕ್ಕೆ ಇಳಿಯಬಾರದು ಅಂತ ಮುಸ್ಲಿಂ ನಾಯಕರಿಗೆ ಮನವಿ ಮಾಡಿದ್ದೇನೆ. ನಾಳೆ ಮತ್ತು ನಾಡಿದ್ದು ನಿಷೇಧಾಜ್ಞೆ ಮುಂದುವರೆಯುತ್ತದೆ ಎಂದರು.