ಬೆಂಗಳೂರು : ಸಂಜಯನಗರ ಪೊಲೀಸರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಟ್ನಲ್ಲಿದ್ದ ಪೊಲೀಸರು ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದರು. ಇದೇ ವೇಳೆ ಯಶವಂತಪುರದ 1 ನೇ ಮುಖ್ಯರಸ್ತೆಯಲ್ಲಿ ಬಿಜಾಪುರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನನಗೆ ಕೊರೊನಾ ಇದೆ, ನನ್ನನ್ನು ಬಂದು ಮುಟ್ಟಿ ಎಂದು ಸಾರ್ವಜನಿಕ ಸ್ಥಳದಲ್ಲಿ ಕೂಗಾಡಿಕೊಂಡು ಓಡಾಡ್ತಿದ್ದ. ಇದನ್ನು ಗಮನಿಸಿದ ಯಶವಂತಪುರ ಪೊಲೀಸರು ಮೇಲ್ನೋಟಕ್ಕೆ ಮಾದಕ ದ್ರವ್ಯ ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಆರೋಪಿ ಲಾಠಿ ರುಚಿ ತಿಂದ್ರೂ ಕೂಡ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಇನ್ನು ಆರೋಪಿಯನ್ನು ಯಶವಂತಪುರ ಪೊಲೀಸ್ ಕಸ್ಟಡಿಗೆ ಒಳಪಡಿಸಿದಾಗ ಆರೋಪಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥ ನಂತೆ ನಡೆದುಕೊಳ್ಳುತ್ತಿರುವ ಕಾರಣ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಮಾತನಾಡಿ, ಸದ್ಯಕ್ಕೆ ಆತ ಮಾನಸಿಕ ಖಿನ್ನತೆಗೆ ಒಳಗಾದ ರೀತಿ ಕಾಣಿಸುತ್ತಿದ್ದಾನೆ. ಸದ್ಯ ಆತನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯ ನಂತ್ರ ಸತ್ಯಾಂಶ ತಿಳಿದುಬರಲಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ರೆ ಕೇಸ್ ದಾಖಲಿಸಲು ಬರೋದಿಲ್ಲ, ಇಲ್ಲಂದ್ರೆ ಕೇಸ್ ದಾಖಲಿಸಿ ತನಿಖೆ ಮುಂದುವರೆಸಲಾಗುವುದು ಎಂದರು.