ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಪರಿಣಾಮ 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕರ್ನಾಟಕ ಗಡಿಭಾಗದ ಹೊಸೂರು ಪಟ್ಟಣದ ರಾಮನಗರದ ಮನೆಯೊಂದರಲ್ಲಿ ನಡೆದಿದೆ.
ಭೀಮಸಿಂಗ್, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್ಸಿಂಗ್, ಹೃತಿಕ್, ಸಬೀರ್ ಮತ್ತು ಸಾಧಿಕ್ ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರಲ್ಲಿ ಒಂದೇ ಕುಟುಂಬದ 7 ಜನರಿದ್ದರೆ, ಅಕ್ಕ-ಪಕ್ಕದ ಮನೆಯಲ್ಲಿದ್ದ ಮತ್ತಿಬ್ಬರು ಸಣ್ಣ-ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಬೆಳಿಗ್ಗೆ ಆಡುಗೆ ಮಾಡಲು ಗ್ಯಾಸ್ ಸ್ಟೌವ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದಿಂದ ಹೊಸೂರಿಗೆ ಬಂದು ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕುಟುಂಬ ಇದಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಗಾಂಜಾ ಮಾರಾಟ: ಚಿಕ್ಕೋಡಿಯಲ್ಲಿ ಇಬ್ಬರ ಬಂಧನ
ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರ ಛಿದ್ರವಾಗಿವೆ. ಮನೆಯ ಮೇಲ್ಛಾವಣಿಯ ಶೀಟ್ ಪೀಸ್ ಪೀಸ್ ಆಗಿದೆ. ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮಗೊಂಡಿವೆ. ಪ್ರಕರಣ ಸಂಬಂಧ ಹೊಸೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.