ಬೆಂಗಳೂರು : ಹಿಟಾಚಿ ಹರಿದು ಮೂರು ವರ್ಷದ ಮಗು ದುರ್ಮರಣಕ್ಕೀಡಾಗಿರುವ ಘಟನೆ ಬೆಂಗಳೂರಿನ ಉಪ್ಪಾರಪೇಟೆ ಬಳಿಯ ಧನ್ವಂತರಿ ರೋಡ್‌ನಲ್ಲಿ ಈ ಘಟನೆ ನಡೆದಿದೆ.

ಮೆಜೆಸ್ಟಿಕ್ ಧನ್ವಂತರಿ ರಸ್ತೆ ಸಂಗಮ್ ಎಂಟರ್‌ಪ್ರೈಸಸ್ ಬಳಿಯ ನಿವಾಸಿ ಡೇವಿಡ್ ಜಾನ್ ಮತ್ತು ನೇತ್ರಾವತಿ ದಂಪತಿ ಪುತ್ರ ಸಿಮಿಯಾನ್ (3) ಮೃತಪಟ್ಟ ಬಾಲಕ. ಡೇವಿಡ್ ಜಾನ್ ದಂಪತಿ ಧನ್ವಂತರಿ ರೋಡ್‌ನಲ್ಲಿ ಡೇರೆ ಹಾಕಿಕೊಂಡು ವಾಸಿಸುತ್ತಿದ್ದರು. ಅಲ್ಲಿ ಹಲವು ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿತ್ತು. ಈ ವಾಹನಗಳನ್ನು ಯಾರೂ ಕದ್ದೊಯ್ಯದಂತೆ ಡೇವಿಡ್ ಜಾನ್ ನೋಡಿಕೊಳ್ಳುತ್ತಿದ್ದನು. ಇದಕ್ಕೆ ವಾಹನ ಮಾಲೀಕರು ಆತನಿಗೆ ಇಂತಿಷ್ಟು ಹಣ ಕೊಡುತ್ತಿದ್ದರು.
ಶನಿವಾರ ಬೆಳಗ್ಗೆ 5.30ರಲ್ಲಿ ಸಿಮಿಯಾನ್ ನಿದ್ದೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಬಿಟ್ಟು ಡೇವಿಡ್ ಜಾನ್ ಹೊರ ಹೋಗಿದ್ದನು. ಆ ವೇಳೆ ಎಚ್ಚರಗೊಂಡ ಸಿಮಿಯಾನ್, ಮನೆ ಮುಂದೆ ನಿಲುಗಡೆ ಮಾಡಿದ್ದ ಹಿಟಾಚಿ ವಾಹನದ ಹಿಂದಿನ ಚಕ್ರದ ಬಳಿ ಕುಳಿತಿದ್ದನು. ಚಾಲಕ ಶಂಕರ್ ನಾಯಕ್ ಹಿಂದೆ ಗಮನಿಸದೇ ಚಲಾಯಿಸಿದ್ದಾನೆ. ಪರಿಣಾಮ ಸಿಮಿಯಾನ್ ಮೇಲೆ ಹಿಟಾಚಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿರಿ: ಬಾಲಾಜಿ ದರ್ಶನ ಪಡೆದ ಕಂಗನಾ.. ಕಡಿಮೆ FIR, ಹೆಚ್ಚು Love Letters ಬರಲೆಂದು ಬೇಡಿಕೊಂಡರಂತೆ!