ದೇವನಹಳ್ಳಿ : ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಕೊರೊನಾ ಸೊಂಕಿತರ ಪ್ರಮಾಣ ಹೆಚ್ಚುತ್ತಲೇ ಇತ್ತು. ಆದರೆ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಡಳಿತ ತೆಗೆದುಕೊಂಡ ಕಟ್ಟು ನಿಟ್ಟಿನ ಕ್ರಮಗಳಿಂದ ಕೊರೊನಾ ಸೊಂಕಿತರ ಸಂಖ್ಯೆ ಇಳಿಮುಖವಾಗಿದೆ.
ಜಿಲ್ಲೆಯ 365 ಗ್ರಾಮಗಳು ಕೊರೊನಾದಿಂದ ಮುಕ್ತವಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1091 ಗ್ರಾಮಗಳ ಪೈಕಿ 365 ಗ್ರಾಮಗಳು ಕೊರೊನಾದಿಂದ ಮುಕ್ತವಾಗಿವೆ, ನೆಲಮಂಗಲ ತಾಲೂಕಿನಲ್ಲಿ ಅತಿ ಹೆಚ್ಚಿನ ಗ್ರಾಮಗಳು ಕೊರೊನಾದಿಂದ ಮುಕ್ತವಾಗಿವೆ.
ನೆಲಮಂಗಲ ತಾಲೂಕಿನ 171, ದೊಡ್ಡಬಳ್ಳಾಪುರ ತಾಲೂಕಿನ 98, ಹೊಸಕೋಟೆ ತಾಲೂಕಿನ 58 ಮತ್ತು ದೇವನಹಳ್ಳಿ ತಾಲೂಕಿನ 40 ಗ್ರಾಮಗಳು ಕೊರೊನಾದಿಂದ ಮುಕ್ತವಾಗಿವೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳು ಕೊರೊನಾದಿಂದ ಮುಕ್ತವಾಗುವ ನಿರೀಕ್ಷೆಯನ್ನ ಜಿಲ್ಲಾ ಪಂಚಾಯತ್ ಸಿಇಒ ಎಂ.ಆರ್. ರವಿಕುಮಾರ್ ವ್ಯಕ್ತಪಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ಪ್ರಾರಂಭದ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಿನಕ್ಕೆ 1 ಸಾವಿರಕ್ಕೂ ಹೆಚ್ಚು ಸೊಂಕಿತ ಪ್ರಕರಣಗಳು ದಾಖಲಾಗುತ್ತಿತ್ತು. ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸೊಂಕಿತರ ಪ್ರಮಾಣ ಹೆಚ್ಚುತ್ತಲೇ ಇತ್ತು. ಇದರ ಗಂಭೀರತೆ ಅರಿತು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಎಂ.ಆರ್ ರವಿಕುಮಾರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ತಂಡ ರಚನೆ ಮಾಡಲಾಗಿತ್ತು ಮತ್ತು ಗ್ರಾಮಸ್ಥರು ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದು, ಕೊರೊನಾ ನಿಯಂತ್ರಣಕ್ಕೆ ಬಂದಿದೆ.
ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಮೊಬೈಲ್ ಕ್ಲಿನಿಕ್ ಗಳು ಗ್ರಾಮಾಂತರ ಪ್ರದೇಶಗಳಿಗೆ ಹೋಗುವ ಮೂಲಕ ಗ್ರಾಮೀಣ ಭಾಗದಲ್ಲಿನ ಸೊಂಕಿತರ ಪತ್ತೆ ಮಾಡಿ, ಔಷಧಗಳನ್ನ ನೀಡಲಾಯಿತು. ಇಲ್ಲಿಯವರೆಗೂ 938 ಗ್ರಾ ಮಗಳಿಗೆ ಮೊಬೈಲ್ ಕ್ಲಿನಿಕ್ ಗಳು ಭೇಟಿ 32, 992 ಜನರ ಸ್ಕ್ರೀನಿಂಗ್ ನಡೆಸಿದೆ, ಇದರಲ್ಲಿ 1373 ಸೊಂಕಿತರು ಪತ್ತೆಯಾಗಿದ್ದಾರೆ.
ಜೂನ್ 2 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 164 ಸೊಂಕಿತ ಪ್ರಕರಣಗಳು ದಾಖಲಾಗಿದ್ದು, ಕ್ರಮೇಣ ಇಳಿಮುಖವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 53991 ಕೋವಿಡ್ ಪ್ರಕರಣ ಧೃಢಪಟ್ಟಿದ್ದು, 45651 ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 7654 ಸಕ್ರಿಯ ಪ್ರಕರಣಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೋವಿಡ್ನಿಂದ 686 ಜನರು ಸಾವನ್ನಪ್ಪಿದ್ದಾರೆ.