ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಡೆಗಳಲ್ಲಿ ತಲಾ 25 ರಂತೆ ಆಕ್ಸಿಜನ್ ಕಾನ್ಸಂಟ್ರೇಟರ್ ಕಳುಹಿಸಿಕೊಡಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೋವಿಡ್ ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಿಗೆ 25 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲಾಗುತ್ತಿದೆ. ಇತ್ತೀಚೆಗೆ 800 ಕಾನ್ಸಂಟ್ರೇಟರ್ ಬಂದಿದ್ದು, ಜಿಲ್ಲೆಗಳಿಗೆ ಹಂಚಲಾಗುತ್ತಿದೆ. ಮಂಡ್ಯ, ಚಿತ್ರದುರ್ಗ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ ಮೊದಲಾದ ಮೂಲಸೌಕರ್ಯ ಕಡಿಮೆ ಇರುವ ಕಡೆಗಳಿಗೆ ನೀಡಲಾಗುತ್ತಿದೆ. ರಾಜ್ಯದ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಚಿಕಿತ್ಸೆಗೆ ಐಸಿಯು ವ್ಯವಸ್ಥೆ, ಆಕ್ಸಿಜನ್ ಪೂರೈಕೆ ಸೇರಿದಂತೆ ಹೆಚ್ಚು ನೆರವು ನೀಡಲು ಚರ್ಚಿಸಲಾಗುವುದು. ಇದಕ್ಕಾಗಿ ತುಮಕೂರು, ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಾಗುತ್ತಿದೆ. ನಂತರ ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ಭೇಟಿ ನೀಡಿ ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರತಿ ಜಿಲ್ಲಾಡಳಿತ, ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಮಾಹಿತಿ ನೀಡಲಾಗುವುದು. ಎಲ್ಲಾ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೋರಲಾಗುವುದು. ಪಾಸಿಟಿವಿಟಿ ದರ 37-40% ಇದ್ದಿದ್ದು, 27% ಕ್ಕೆ ಬಂದಿದೆ. ಇದನ್ನು 5% ಕ್ಕಿಂತ ಕಡಿಮೆ ಇಳಿಸುವ ಗುರಿ ಇದೆ. ಬೇರೆ ದೇಶಗಳ ಕೊರೊನಾ ಅಲೆ ಬಗ್ಗೆ ಕಾನ್ಪುರ ಐಐಟಿ ವರದಿ ನೀಡಿದ್ದು, ಈ ಬಗ್ಗೆ ಕೇಂದ್ರದ ಜೊತೆ ಚರ್ಚೆಯಾಗಿ ಸಲಹೆ ದೊರೆತಿದೆ. ಸಾವಿನ ಸಂಖ್ಯೆ ಹೆಚ್ಚು ಕಂಡುಬರುತ್ತಿದ್ದು, ಅದನ್ನೂ ಕಡಿಮೆ ಮಾಡಬೇಕಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂ. ಮುಂಗಡ ನೀಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ಹಳ್ಳಿಗಳ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗೆ ಇದು ಅನುಕೂಲವಾಗಲಿದೆ. ಸೋಂಕಿತರ ಮನೆಗೆ ಭೇಟಿ ನೀಡಿ, ಅವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸಾಗಿಸಲು ಸಹಕಾರಿಯಾಗಲಿದೆ ಎಂದರು.
ಅಂಕಿ ಅಂಶ ಮುಚ್ಚಿಟ್ಟರೆ ಯಾವುದೇ ಲಾಭವಿಲ್ಲ. ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಇನ್ನೂ ಹೆಚ್ಚಿಸಲು, 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಸೂಚಿಸಲಾಗಿದೆ. ಬ್ಲ್ಯಾಕ್ ಫಂಗಸ್ ಪ್ರಕರಣ ನೋಡಿಕೊಂಡು ಔಷಧಿ ವಿತರಣೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಔಷಧಿ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋವಿಡ್ ನಿಂದ ಗುಣಮುಖರಾದವರ ಆರೋಗ್ಯದ ಮೇಲೆಯೂ ನಿಗಾ ಇಡಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.