ಬೆಂಗಳೂರು: ವೀಸಾ ಅವಧಿ ಮುಗಿದರೂ ಕಾನೂನುಬಾಹಿರವಾಗಿ ವಿದೇಶಿ ಪ್ರಜೆಗಳು ರಾಜ್ಯದಲ್ಲಿ ವಾಸ್ತವ್ಯ ಹೂಡಿ, ಆಗಾಗ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ರಾಜಧಾನಿ ಸೇರಿದಂತೆ ರಾಜ್ಯದ ವಿವಿಧೆಡೆ 2 ಲಕ್ಷಕ್ಕೂ ಹೆಚ್ಚು ವಲಸಿಗರಿದ್ದು, ಅವರನ್ನು ಗಡಿಪಾರು ಮಾಡಲು ರಾಜ್ಯ ಸರ್ಕಾರ 2017ರಲ್ಲೇ ಆದೇಶಿಸಿತ್ತು. ಜೊತೆಗೆ ವಲಸಿಗರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೂ ಕಳುಹಿಸಿತ್ತು.
ಆದ್ರೆ ವಲಸಿಗರನ್ನು ಗಡಿಪಾರು ಮಾಡುವ ಬಗ್ಗೆ ಕೇಂದ್ರದಿಂದ ಅನುಮತಿ ಸಿಗದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮುಂದುವರೆಯಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ವಿದೇಶಿಗರು ಅನೈತಿಕ, ಅಕ್ರಮ ಚಟುವಟಿಕೆಗಳಿಗೆ ಇಳಿದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2 ಲಕ್ಷಕ್ಕೂ ಹೆಚ್ಚು ವಲಸಿಗರು:
ಕರ್ನಾಟಕದಲ್ಲಿ ಸುಮಾರು ಅಕ್ರಮವಾಗಿ 2 ಲಕ್ಷ ವಿದೇಶಿ ಪ್ರಜೆಗಳು ವಾಸಿಸುತ್ತಿದ್ದಾರೆ. ಇವರ ವೀಸಾ ಅವಧಿ ಮುಗಿದಿದೆ. ಗೃಹ ಇಲಾಖೆ ನಡೆಸಿದ ಸರ್ವೆ ಮೂಲಕ ಈ ವಿಚಾರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಗರದಲ್ಲೇ ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ರಾಜಧಾನಿಯ ಕೊತ್ತನೂರು, ಹೆಣ್ಣೂರು, ನಾಗವಾರ, ಲಿಂಗರಾಜಪುರ, ಬಾಗಲೂರು, ಬಾಗಲಕುಂಟೆ ಭಾಗಗಳಲ್ಲೇ ಅತಿ ಹೆಚ್ಚು ವಿದೇಶಿ ಪ್ರಜೆಗಳಿದ್ದಾರೆ. ಉಗಾಂಡ, ಕೀನ್ಯಾ, ನೈಜೀರಿಯಾ, ಸುಡಾನ್ ಸೇರಿದಂತೆ ಆಫ್ರಿಕಾದ ಹಲವು ದೇಶದ ಪ್ರಜೆಗಳಿದ್ದಾರೆ.
ಹೇಗೆ ಲಗ್ಗೆ ಇಡ್ತಾರೆ?
ವಿದ್ಯಾಭ್ಯಾಸಕ್ಕೆ ಮತ್ತು ಉದ್ಯೋಗಕ್ಕೆ ಎಂದು ಬರುವ ಇವರು ಇಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಡ್ರಗ್ಸ್ ಸೇವನೆ, ಕಳ್ಳತನ, ಪಿಕ್ ಪಾಕೆಟ್, ಕೊಕೇನ್ ಮಾರಾಟ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಮದ್ಯಪಾನ, ಹೋಟೆಲ್ನಲ್ಲಿ ಕಿರಿಕಿರಿ, ವೇಶ್ಯಾವಾಟಿಕೆ ಮುಂತಾದ ಕೇಸ್ಗಳಲ್ಲಿ ಇವರದ್ದೇ ಸಿಂಹಪಾಲು ಎನ್ನುತ್ತಾರೆ ಪೊಲೀಸರು.
ನಕಲಿ ವೀಸಾದಡಿ ವಾಸ್ತವ್ಯ?
ಕೆಲವರು ಇಲ್ಲಿಗೆ ಬರೋದೆ ಅಕ್ರಮ ಚಟುವಟಿಕೆ ನಡೆಸಲು. ಇನ್ನೂ ಹಲವರು ಜನ ಕೆಲಸಕ್ಕೆಂದು ಬರುತ್ತಾರೆ. ವೀಸಾ ಅವಧಿ ಮುಗಿದರೂ ನಕಲಿ ವೀಸಾ ಮಾಡಿಸಿಕೊಳ್ಳುತ್ತಾರೆ. ಅವರವರ ದೇಶದ ಏಜೆಂಟ್ಗಳ ಸಹಾಯ ಪಡೆಯುತ್ತಾರೆ. ಆದರೆ ಇದುವರೆಗೂ ಆ ಏಜೆಂಟ್ಗಳ ಪತ್ತೆ ಕಾರ್ಯವಾಗಿಲ್ಲ. ಇಲ್ಲಿಯೂ ಸಹ ಅವರ ಮಧ್ಯವರ್ತಿಗಳಿದ್ದಾರೆ. ಅವರ ಹುಡುಕಾಟ ನಡೆಸಿದರೂ ಒಂದೆರೆಡು ಮಂದಿ ಸಿಕ್ಕಿದ್ದು, ಇನ್ನುಳಿದ ಕಿಂಗ್ ಪಿನ್ ಗಳ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಓದಿ: ಬೆಂಗಳೂರು ಪೊಲೀಸರ ವಶದಲ್ಲಿದ್ದ ವಿದೇಶಿ ಪ್ರಜೆ ಸಾವು ಆರೋಪ: ಠಾಣೆ ಮುಂದೆ ಹೈಡ್ರಾಮಾ, ಖಾಕಿಯಿಂದ ಲಾಠಿ ಚಾರ್ಜ್