ಬೆಂಗಳೂರು: ವಿಧಾನಸೌಧದ ಮುಂದೆ ಬಸವಣ್ಣನ ಮೂರ್ತಿ ಕೂರಿಸುವ ಕೆಲಸನ್ನು ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಅವರು ಆರಂಭಿಸಿದ್ದಾರೆ. ಇದನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪೂರ್ಣಗೊಳಿಸಬೇಕು. ಮಹಾರಾಷ್ಟ್ರದಲ್ಲಿ ಶಿವಾಜಿಯನ್ನು ಸಾಂಸ್ಕೃತಿಕ ನಾಯಕರನ್ನಾಗಿ ಸ್ವೀಕರಿಸಿದ್ದಾರೆ.
ಅದೇ ರೀತಿ ರಾಜ್ಯದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಒಪ್ಪಿಕೊಳ್ಳಬೇಕು ಎಂದು ಬಸವ ರಾಷ್ಟ್ರೀಯ ಪ್ರಶಸ್ತಿ ಪಡೆದ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಅಭಿಪ್ರಾಯಪಟ್ಟರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, 2019-20ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಹದಿನೈದು ಮಂದಿ ಸಾಧಕರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್, ಶಾಸಕ ಉದಯ ಗರುಡಾಚಾರ್, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಬಸವಲಿಂಗ ಪಟ್ಟದೇವರು ಭಾಗಿಯಾಗಿದ್ದರು.
ಅನುಭವ ಮಂಟಪ ಶೀಘ್ರ ನಿರ್ಮಾಣವಾಗಲಿ:
ಬಸವ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸವಲಿಂಗ ಪಟ್ಟದೇವರು, ಎಲ್ಲ ಬಸವಾಭಿಮಾನಿಗಳಿಗೆ ಈ ಪ್ರಶಸ್ತಿ ಸಲ್ಲಬೇಕು. ಮೊಟ್ಟಮೊದಲು ಪ್ರಜಾಪ್ರಭುತ್ವ ಕೊಟ್ಟವರು ಬಸವಣ್ಣನವರು. ಸಿಎಂ ಅವರ ಹೆಸರೂ ಕೂಡ ಬಸವರಾಜ್ ಇರುವುದರಿಂದ ಅನುಭವ ಮಂಟಪವನ್ನು ಬೇಗನೇ ನಿರ್ಮಾಣ ಮಾಡಲಿ.
ಇದು ಇಡೀ ಜಗತ್ತಿಗೆ ಮಾದರಿಯಾಗಬೇಕು. ಬಸವಣ್ಣನ ವಚನಗಳು ಇತರೆ ಭಾರತೀಯ ಭಾಷೆಗಳಿಗೂ ಭಾಷಾಂತರವಾಗಬೇಕು ಎಂದು ಮನವಿ ಮಾಡಿದರು.
ಪುಸ್ತಕ ಕೊಡಿ ಅಂದಿದ್ದೆ - ನನಗೆ ಇಲಾಖೆಯನ್ನೇ ಕೊಟ್ಟರು:
ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ, 2019-20 ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಪ್ರಶಸ್ತಿಗಳಿಗೆ ಸಾಧಕರು ಆಯ್ಕೆಯಾಗಿದ್ದರೂ, ಕೋವಿಡ್ ಕಾರಣದಿಂದ ಕೊಡಲಾಗಿಲ್ಲ ಎಂದು ಸಿಎಂಗೆ ತಿಳಿಸಿದ ತಕ್ಷಣ, ಸಿಎಂ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಲು ಆದೇಶ ಕೊಟ್ಟರು.
ನನ್ನ ಊರಿಗೆ ಹೋದಾಗ ಹಾರ ತುರಾಯಿ ಬೇಡ, ಪುಸ್ತಕ ಕೊಡಿ ಅಂದಿದ್ದಕ್ಕೆ ಮುಖ್ಯಮಂತ್ರಿಗಳು ನನಗೆ ಇಲಾಖೆಯನ್ನೇ ಕೊಟ್ಟರು. ದೆಹಲಿಯ ಜೆಎನ್ಯುವಿನಲ್ಲಿ ಕನ್ನಡ ಅಧ್ಯಯನ ಪೀಠ ಆರಂಭಿಸಲಾಗಿತ್ತು. ಇದೀಗ ಕನ್ನಡವನ್ನು ಅಧ್ಯಯನ ವಿಷಯವಾಗಿಯೂ ಆಯ್ಕೆ ಮಾಡಲು ಜೆಎನ್ಯು ನಿರ್ಧರಿಸಿರುವುದು ಖುಷಿಯ ಸಂಗತಿ ಎಂದರು.
ಕೋವಿಡ್ನಿಂದ ಕಲಾವಿದರಿಗೂ ಅನಾನುಕೂಲ:
ಕೋವಿಡ್ನಿಂದ ಕಲಾವಿದರಿಗೂ ಅನಾನುಕೂಲವಾಗಿದೆ. ಈ ವರ್ಷ ಕಾರ್ಯಕ್ರಮಗಳನ್ನು ಮಾಡಲು ಅಸಾಧ್ಯವಾಗಿರುವ 20 ಸಾವಿರ ಕಲಾವಿದರಿಗೆ ಸರ್ಕಾರ 3 ಸಾವಿರ ರೂ. ಕೊಟ್ಟಿದೆ. 20-21, 21-22 ನೇ ಸಾಲಿನ ಪ್ರಶಸ್ತಿ ನೀಡಲು ಆಯ್ಕೆ ಸಮಿತಿಯನ್ನು ಹತ್ತು ದಿನಗಳಲ್ಲಿ ರಚಿಸಲಾಗುವುದು ಎಂದರು.
ಹಳ್ಳಿಗಳ, ಊರಿನ ಮೂಲೆ - ಮೂಲೆಯ ಕಲಾವಿದರು, ಹಿರಿಯರು ನಮ್ಮನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಬರಲು ಕಷ್ಟವಾಗುವ ಹಿನ್ನೆಲೆ, ತಿಂಗಳ ಎರಡು ದಿನಗಳ ಕಾಲ ಒಂದೆರಡು ಗಂಟೆ ಕಲಾಕ್ಷೇತ್ರದಲ್ಲಿ ಕಳೆಯುತ್ತೇನೆ ಎಂದರು. ಸಾಂಸ್ಕೃತಿಕ ನೀತಿ ರೂಪುಗೊಳಿಸಲು ಎಲ್ಲರ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.
ಪ್ರಶಸ್ತಿಗಳು - ಸಾಧಕರು:
- ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ನೀಡಿ ಗೌರವಿಸಲಾಯಿತು. ಇವರು ತಮ್ಮ ಇಪ್ಪತ್ತನೇ ವಯಸ್ಸಿನಿಂದಲೂ ಜನಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
- ಬಸವ ರಾಷ್ಟ್ರೀಯ ಪ್ರಶಸ್ತಿಯನ್ನು ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಶಿಕ್ಷಣ, ಸಮಾಜಮುಖಿ ಸಾಧನೆ ಮಾಡಿರುವ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದೇವರು ಅವರಿಗೆ ನೀಡಿ ಗೌರವಿಸಲಾಯಿತು. ವಚನ ಪ್ರವಚನ ಕಾರ್ಯಕ್ರಮಗಳು, ಅನ್ನ, ವಿದ್ಯೆ ಮೊದಲಾದ ತ್ರಿವಿಧ ದಾಸೋಹದಲ್ಲಿ ತೊಡಗಿದ್ದಾರೆ.
- ಟಿ. ಚೌಡಯ್ಯ ಪ್ರಶಸ್ತಿಯನ್ನು ಡಾ. ನರಸಿಂಹಲು ಅವರಿಗೆ ಕೊಟ್ಟು ಗೌರವಿಸಲಾಯಿತು. ಇವರು ಆಕಾಶವಾಣಿಯಲ್ಲಿ ದುಡಿದು, ದೇಶ ವಿದೇಶಗಳಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.
- ಶಾಂತಲಾ ನಾಟ್ಯರಾಣಿ ಪ್ರಶಸ್ತಿಯನ್ನು ದೇಶ ವಿದೇಶಗಳಲ್ಲಿ ನೃತ್ಯ ಪಸರಿಸಿದ ವಿದೂಷಿ ಬಿಕೆ ವಸಂತ ಲಕ್ಷ್ಮಿ ಅವರಿಗೆ ಕೊಡಲಾಯಿತು.
- ಸಂಗೊಳ್ಳಿರಾಯಣ್ಣ ಪ್ರಶಸ್ತಿಯನ್ನು ಕನ್ನಡಕ್ಕಾಗಿ, ನಾಡು - ನುಡಿಯ ರಕ್ಷಣೆಗಾಗಿ ದುಡಿದ ಚಿಂತಕರಾದ, ಅಂಕಣಕಾರರಾದ ರಾ. ನಂ ಚಂದ್ರಶೇಖರ ಅವರಿಗೆ ನೀಡಲಾಯಿತು.
- ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು, ಲೇಖಕಿ, ವಿಮರ್ಶಕಿಯಾಗಿರುವ ಡಾ. ಚೂಡಾಮಣಿ ನಂದಗೋಪಾಲ ಅವರಿಗೆ ಕೊಡಮಾಡಲಾಯಿತು.
- ಪ್ರೊ. ಕೆ.ಜಿ ಕುಂದಣಗಾರ್ ಗಡಿನಾಡ ಪ್ರಶಸ್ತಿಯನ್ನು, ಅಕಾಡೆಮಿ, ಪುಸ್ತಕ ಪ್ರಾಧಿಕಾರದಲ್ಲಿ ದುಡಿದ ಪ್ರೊ. ಸಿದ್ದಣ್ಣ ಅವರಿಗೆ ನೀಡಲಾಯಿತು.
- ಅಕ್ಕಮಹಾದೇವಿ ಪ್ರಶಸ್ತಿಯನ್ನು ಬರಹಗಾರ್ತಿ, ಸಾಧಕಿ ಆಗಿರುವ ಡಾ. ಜಯಶ್ರೀ ದಂಡೆ ಅವರಿಗೆ ನೀಡಲಾಯಿತು.
- ಜಕ್ಕಣಾಚಾರಿ ಪ್ರಶಸ್ತಿಯನ್ನು ಶಿಲ್ಪಕಲೆಯಲ್ಲಿ ಸಾಧಕರಾದ ಮೈಸೂರಿನ ಬಿ.ಎಸ್ ಯೋಗಿರಾಜ ಅವರಿಗೆ ಕೊಡಲಾಯಿತು.
- ಡಾ. ಗುಬ್ಬಿವೀರಣ್ಣ ಪ್ರಶಸ್ತಿಯನ್ನು ಪಕ್ಕವಾದ್ಯಪಟು ಮದಿರೆ ಮರಿಸ್ವಾಮಿ ಅವರಿಗೆ ನೀಡಲಾಯಿತು.
- ಜಾನಪದ ಶ್ರೀ ಪ್ರಶಸ್ತಿಯನ್ನು ಕಲಾವಿದರಾದ ಬಿ. ಟಾಕಪ್ಪ ಕಣ್ಣೂರು ಅವರಿಗೆ ನೀಡಲಾಯಿತು.
- ನಿಜಗುಣ ಪುರಂದರ ಪ್ರಶಸ್ತಿಯನ್ನು ಸಂಗೀತಗಾರರಾದ ಗೌರಿ ಕುಪ್ಪುಸ್ವಾಮಿ ಅವರಿಗೆ ನೀಡಲಾಯಿತು.
- ಸಂತ ಶಿಶುನಾಳ ಶರೀಫರ ಪ್ರಶಸ್ತಿಯನ್ನು ಕರ್ನಾಟಕ-ಹಿಂದೂಸ್ತಾನಿ ಸಾಧಕ ಸಂಗೀತಗಾರರಾದ ಪಂಡಿತ ವಾದಿರಾಜ ನಿಂಬರಗಿ ಅವರಿಗೆ ನೀಡಲಾಯಿತು.
- ಕುಮಾರವ್ಯಾಸ ಪ್ರಶಸ್ತಿಯನ್ನು ಗಮಕ ಕಲೆಯ ಕ್ಷೇತ್ರದ ಸಾಧಕಿಯಾದ ಗಂಗಮ್ಮ ಕೇಶವಮೂರ್ತಿ ಅವರಿಗೆ ಕೊಡಮಾಡಲಾಯಿತು.
- ಬಿವಿ ಕಾರಂತ ಪ್ರಶಸ್ತಿಯನ್ನು ರಂಗ ದಿಗ್ಗಜರಾದ ಹೆಚ್.ವಿ ವೆಂಕಟಸುಬ್ಬಯ್ಯ ಅವರಿಗೆ ಪುರಸ್ಕರಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಲು ಮುಂದಾದಾಗ, ಡಯಾಸ್ ಮುಂದಿದ್ದ ಹೂವಿನ ಅಲಂಕಾರವನ್ನು ತೆಗೆಯಲು ಹೇಳಿ, ಡಯಾಸ್ ಎತ್ತರವಿದ್ದ ಕಾರಣಕ್ಕೆ, ನಾನಿನ್ನೂ ಅಷ್ಟು ಎತ್ತರಕ್ಕೆ ಬೆಳೆದಿಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು. ನಂತರ ಮಾತನಾಡಿದ ಅವರು, ಪ್ರಸಿದ್ಧಿ ಇದ್ದವರಿಗೆ ಪ್ರಶಸ್ತಿ ಸಿಗುತ್ತದೆ.
ಆದರೆ, ಈ ಬಾರಿ ಎರಡು ವರ್ಷ ತಡ ಆದರೂ ಸಾಧಕರಿಗೆ ಪ್ರಶಸ್ತಿ ಕೊಟ್ಟಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ ಎಂಬ ವಿವೇಕಾನಂದರ ಮಾತಿನಂತೆ, ಬದುಕನ್ನ ಹುಟ್ಟು - ಸಾವು ಮಧ್ಯದ ಸೀಮಿತತೆಗೆ ನಿಗದಿ ಮಾಡಿರಲಿಲ್ಲ. ಧರ್ಮಸ್ಥಳದ ಪರಮ ಪೂಜ್ಯರು ಕೇವಲ ಧರ್ಮಾಧಿಕಾರಿಯಾಗಿ ಅಲ್ಲ, ಜಗದ ಕೊರತೆಗಳನ್ನು ನೀಗಿಸುವ ಛಲ, ಬುದ್ಧವಂತಿಕೆಯಿಂದ ಸಾಧಿಸಿದ್ದಾರೆ. ಗ್ರಾಮೀಣಾಭಿವೃದ್ಧಿಯನ್ನು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.
ನಮ್ಮ ಸಂಸ್ಕೃತಿಯೇನು?
ಕೆಲವರು ಬಹಳ ಮಾತನಾಡುತ್ತಾರೆ. ಆದರೆ ಏನೂ ಮಾತಾಡದೇ, ಬಸವತತ್ತ್ವವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡು ಬೀದರ್ ಜಿಲ್ಲೆಯಿಂದ ಕೊಳ್ಳೇಗಾಲದವರೆಗೂ ಬಸವಲಿಂಗಪಟ್ಟದೇವರು ಜನರಿಗೆ ಒಳಿತು ಮಾಡುತ್ತಿದ್ದಾರೆ ಎಂದರು.
ನಮ್ಮ ಹತ್ತಿರ ಮನೆ, ಆಸ್ತಿ ಇರುವುದು ನಮ್ಮ ನಾಗರಿಕತೆ. ಆದರೆ, ನಾವೇನು ಆಗಿದ್ದೇವೆ ಅದು ನಮ್ಮ ಸಂಸ್ಕೃತಿ . ನಮ್ಮ ಮೌಲ್ಯಗಳು ಎಷ್ಟು ಗಟ್ಟಿ ಇವೆ, ನಾಗರಿಕ ಕರ್ತವ್ಯ ಪ್ರಜ್ಞೆ, ಮಾನವೀಯ ಸಂಬಂಧಗಳು ಎಷ್ಟು ಚೆನ್ನಾಗಿವೆ ಎಂಬುದು ಸಂಸ್ಕೃತಿ. ಇದನ್ನು ಬೆಳೆಸುವುದು ಇಲಾಖೆಯ ದೊಡ್ಡ ಜವಾಬ್ದಾರಿ ಎಂದರು.
ಕನ್ನಡ ಭಾವನೆಗಳ ಭಾಷೆ:
ಜೊತೆಗೆ ಕನ್ನಡ ಕೇವಲ ಅಕ್ಷರಮಾಲೆ ಅಲ್ಲ. ಭಾವನೆಗಳ ಭಾಷೆ. ಹೀಗಾಗಿ ಮಾತೃಭಾಷೆಯನ್ನು ಎಂದಿಗೂ ಕಡೆಗಣಿಸಬಾರದು, ಎಂದಿಗೂ ಬೇರೆ ಭಾಷೆಗೆ ಹೋಲಿಸಬಾರದು. ಹೀಗಾಗಿ ಮೌಲ್ಯಗಳ ಅಡಿ ಇಲಾಖೆ ಮುನ್ನಡೆಸಬೇಕು. ಹಸಿವು, ಅರಿವು, ಮರೆವು, ಸಾವು ಬದುಕಿನ ಭಾಗ ಎಂದರು.
ಸಿಎಂ ಪ್ರಶಸ್ತಿ ಕೊಡುವುದರೆಂದರೆ ರಾಜಮರ್ಯಾದೆ ಕೊಟ್ಟ ಹಾಗೆ:
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಇದು ಸಿನಿಮಾ ಬಾಹುಬಲಿ ಅಥವಾ ಸಿನಿಮಾ ಮಹಾವೀರ ಅಲ್ಲ. ಇದು ತ್ಯಾಗವೀರ ಮಹಾವೀರ ಅವರ ಪ್ರಶಸ್ತಿ. ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಲ್ಲಿ ಸಾಧಕರಾಗುತ್ತಾರೆ. ಕೆಲಸವನ್ನು ಚಿಕ್ಕ ಕೆಲಸ ಅಂದುಕೊಳ್ಳದೇ ಮಾಡಬೇಕು. ಸಿಎಂ ಪ್ರಶಸ್ತಿ ಕೊಡುವುದರೆಂದರೆ ರಾಜಮರ್ಯಾದೆ ಕೊಟ್ಟ ಹಾಗೆ.
ನಾವು ಸಾಧನೆ ಮಾಡಬೇಕೆಂದರೆ ಇನ್ನೊಬ್ಬರನ್ನು ಅವಕಾಶವಂಚಿತರನ್ನಾಗಿ ಮಾಡಬಾರದು. ನಾವು ಬದುಕಿ, ಇತರರ ಬೆಳವಣಿಗೆಗೆ ಅವಕಾಶ ಮಾಡಿಕೊಡಬೇಕು. ಭಗವಾನ್ ಮಹಾವೀರನ ಶಾಂತಿಯ ಸಂದೇಶ ಎಲ್ಲೆಡೆ ಹರಡಬೇಕು ಅಂದರು.