ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆ ಮಧ್ಯರಾತ್ತಿ 12 ಗಂಟೆಯಿಂಧ ಮಾ. 31ರವರೆಗೆ ನಗರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಜನರ ಸುರಕ್ಷತೆಯಿಂದ ಇಂದು ಮಧ್ಯರಾತ್ರಿಯಿಂದ 144 ಸೆಕ್ಷನ್ ವಿಧಿಸಲಾಗಿದ್ದು, 5ಕ್ಕಿಂತ ಹೆಚ್ಚು ಜನರು ಒಂದೇ ಕಡೆ ಸೇರುವುದನ್ನು ನಿಷೇಧಿಸಲಾಗಿದೆ. ನಾಳೆಯಿಂದ ರಾಜಧಾನಿಗೆ ಯಾವುದೇ ವಾಹನ ಬರುವಂತಿಲ್ಲ. ಅಲ್ಲದೇ ಹೋಗುವಂತಿಲ್ಲ. ನಗರ ಪ್ರವೇಶಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನ ನಿಯೋಜಿಸಲಾಗಿದೆ.
ಯಾವುದೇ ಕಾರಣಕ್ಕೂ ಮನೆ ಬಿಟ್ಟು ನಗರ ನಿವಾಸಿಗಳೂ ಹೊರಗೆ ಬಾರಕೂಡದು. ಅಗತ್ಯ ವಸ್ತುಗಳನ್ನು ಸಾಗಿಸುವ ಗೂಡ್ಸ್ ವಾಹನ ಹೊರತುಪಡಿಸಿ ಖಾಸಗಿ ವಾಹನ ಸಂಚಾರ ಮಾಡುವಂತಿಲ್ಲ. ಯಾವುದೇ ರೀತಿಯ ವಾಣಿಜ್ಯ ಅಂಗಡಿಗಳು ತೆರೆಯುವಂತಿಲ್ಲ. ಅಲ್ಲದೇ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ.
ಪೊಲೀಸ್ ಕಂಟ್ರೋಲ್ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವಿಶೇಷವಾಗಿ ಕ್ಯಾಬ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ವಸತಿ ಸಂಕೀರ್ಣಗಳಿಗೆ ದಿನಸಿ ವಿತರಿಸುವ ಕೆಲಸ ಮಾಡಲಾಗುವುದು. ನಗರದ ಪಿಜಿಗಳು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹೊಟೇಲ್ಗಳಲ್ಲಿ ಉಳಿದುಕೊಂಡಿರುವ ಅತಿಥಿಗಳಿಗೆ ಊಟ ವ್ಯವಸ್ಥೆ ಹೊರತುಪಡಿಸಿದರೆ ಬೇರೆ ಯಾವ ಸೌಲಭ್ಯ ಒದಗಿಸಕೂಡದು.
ಸೀಲ್ ಹಾಕಿಕೊಂಡಿರುವ ವಿದೇಶಿಯರು ಎಲ್ಲೆಂದರಲ್ಲಿ ಓಡಾಡಬಾರದು. ಇಂದು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುವುದು ಗಮನಕ್ಕೆ ಬಂದಿದೆ. ನಾಳೆಯಿಂದ ಅಂತಹ ವ್ಯಕ್ತಿ ಕಂಡುಬಂದರೆ ಅವರನ್ನು ಐಪಿಸಿ ಸೆಕ್ಷನ್ 279 ಪ್ರಕಾರ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.