ಬೆಂಗಳೂರು: ಬರೋಬ್ಬರಿ ಎರಡು ತಿಂಗಳ ಕಾಲ ಬ್ಲಾಕ್ ಫಂಗಸ್ ವಿರುದ್ಧ ಹೋರಾಟ ನಡೆಸಿ, ಬಳ್ಳಾರಿ ಮೂಲದ 14 ವರ್ಷದ ಬಾಲಕಿ ಕಡೆಗೂ ಗುಣಮುಖಳಾಗಿ ಹೊರ ಬಂದಿದ್ದಾಳೆ. ಮೇ 29 ರಂದು ಬೌರಿಂಗ್ ಆಂಡ್ ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ.
ಮಕ್ಕಳಲ್ಲಿ ಬ್ಲಾಕ್ ಫಂಗಸ್ ಕಂಡು ಬಂದ ಮೊದಲೆರಡು ಪ್ರಕರಣಗಳಲ್ಲಿ ಈ ಬಾಲಕಿ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ 11 ವರ್ಷದ ಬಾಲಕ ಇಬ್ಬರೂ ಮೊದಲಿಗರಾಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ. ಇಬ್ಬರಿಗೂ ಟೈಪ್ 1 ಡಯಾಬಿಟಿಸ್ ಕಾಯಿಲೆ ಇರುವುದು ತಡವಾಗಿ ಬೆಳಕಿಗೆ ಬಂದಿದ್ದು, ಬ್ಲಾಕ್ ಫಂಗಸ್ ಸೋಂಕು ಕಣ್ಣು ಹಾಗೂ ಮೆದುಳನ್ನು ಆವರಿಸಿಬಿಟ್ಟಿತ್ತು. ಪರಿಣಾಮ ಇಬ್ಬರೂ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.
ಬಾಲಕಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗುವ ವೇಳೆ ಕಣ್ಣು ನೋವು ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು ಎಂದು ಬೌರಿಂಗ್ ಆಸ್ಪತ್ರೆಯ ಮಕ್ಕಳ ತಜ್ಞ ಚಿಕ್ಕನರಸ ರೆಡ್ಡಿ ತಿಳಿಸಿದ್ದಾರೆ.
ಇನ್ನು ಬಾಲಕಿ ಐದು ತರವಾದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಮೆದುಳು, ಇಎನ್ಟಿ, ಕಣ್ಣು, ಹಲ್ಲು, ಹಾಗೂ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಬಾಲಕಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಡಿಸ್ಚಾರ್ಜ್ ಬಳಿಕವೂ ನಿರಂತರ ಚೆಕಪ್ಗೆ ಬಳ್ಳಾರಿ ಆಸ್ಪತ್ರೆಗೆ ಬರೆದುಕೊಡಲಾಗಿದೆ.
ಕೋವಿಡ್ ಎರಡನೇ ಅಲೆ ಇಳಿಕೆಯಾಗುತ್ತಿದ್ದಂತೆ ಮೆದುಳಿನ ಬ್ಲಾಕ್ ಫಂಗಸ್ ಪ್ರಕರಣಗಳು ಇಳಿಕೆ ಕಾಣುತ್ತಿದ್ದು, ಒಟ್ಟು 3,648 ಪ್ರಕರಣಗಳಲ್ಲಿ 337 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲೇ 1,161 ಪ್ರಕರಣಗಳಿಗೆ ಚಿಕಿತ್ಸೆ ನೀಡಿದ್ದು, ಈ ಪೈಕಿ, 110 ಜನ ಮೃತಪಟ್ಟಿದ್ದಾರೆ. 607 ಜನರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಕ್ಟೋರಿಯಾದಲ್ಲಿ 209, ಬೌರಿಂಗ್ 391, ಕೆ.ಸಿ ಜನರಲ್ನಲ್ಲಿ 4, ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ನಲ್ಲಿ 3 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದೆ.