ಬೆಂಗಳೂರು: ಬಿಜೆಪಿಯ 18 ಸಚಿವರಲ್ಲಿ 10 ಮಂದಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರಾಗೋದಕ್ಕೆ ಯೋಗ ಮತ್ತು ಯೋಗ್ಯತೆ ಬೇಕು ಎಂದು ಯಡಿಯೂರಪ್ಪ ಹೇಳಿದ್ರು. ಚುನಾವಣೆ ಆಯೋಗಕ್ಕೆ ಬಿಜೆಪಿಯವರು ಸಲ್ಲಿಸಿದ ಅಫಿಡವಿಟ್ ನೋಡಿದಾಗ, ಇದೇ ಅವರ ಯೋಗ್ಯತೆ ಎಂದೆನಿಸುತ್ತದೆ. ಬಿಜೆಪಿಯ ಪ್ರಕಾರ ಯೋಗ್ಯತೆ ಎಂದರೆ ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿರುವುದು ಎಂದು ಕಾಣುತ್ತಿದೆ ಎಂದರು.
ಜಗದೀಶ್ ಶೆಟ್ಟರ್, ಸಿಟಿ ರವಿ, ಶ್ರೀರಾಮುಲು, ಅಶೋಕ್ ತಾವೇ ಪಕ್ಷವನ್ನು ಕಟ್ಟಿದ್ದು ಅಂತ ಬಿಂಬಿಸಿಕೊಳ್ತಿದ್ರು. ಆದರೀಗ ಕೇವಲ ಸಚಿವರಾಗಲಷ್ಟೇ ಅವರಿಗಿರುವ ಯೋಗ್ಯತೆ ಎಂದು ಪಕ್ಷ ತೋರಿಸಿಕೊಟ್ಟಿದೆ. ಈ ನಾಯಕರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಡಬೇಕು. ಇಲ್ಲದೇ ಹೋದರೆ ಜನರೇ ಮುಂದಿನ ದಿನಗಳಲ್ಲಿ ನಿಮಗೆ ಕಪಾಳ ಮೋಕ್ಷ ಮಾಡ್ತಾರೆ ಎಂದು ಟೀಕಿಸಿದ್ದಾರೆ.
ಯಾರ್ಯಾರ ಮೇಲಿದೆ ಕ್ರಿಮಿನಲ್ ಕೇಸ್: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ.ಅಶ್ವತ್ ನಾರಾಯಣ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ವಿ.ಸೋಮಣ್ಣ, ಆರ್.ಅಶೋಕ್, ಲಕ್ಷ್ಮಣ ಸವದಿ, ಬಿ.ಶ್ರೀರಾಮುಲು, ಶಶಿಕಲಾ ಜೊಲ್ಲೆ ಹಾಗೂ ಜೆ.ಸಿ.ಮಾಧುಸ್ವಾಮಿ ಅವರ ಮೇಲೆ ಕ್ರಿಮಿನಲ್ ಕೇಸ್ಗಳಿವೆ.