ಬಳ್ಳಾರಿ: ಲೋಕಸಭಾ ಉಪಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಗೆಲುವಿಗೆ ಮಂಗಳವಾರ ಶುಭ ಸೂಚಕವಾಗಿದ್ದು, ಏಪ್ರಿಲ್ 2ರಂದು ಮಂಗಳವಾರವೇ ಮತ್ತೊಮ್ಮೆ ಉಗ್ರಪ್ಪನವರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ ತಿಳಿಸಿದ್ದಾರೆ.
ಜಿಲ್ಲೆಯ ಸಂಡೂರು ಪಟ್ಟಣದಲ್ಲಿಂದು ಲೋಕಸಭಾ ಚುನಾವಣಾ ನಿಮಿತ್ತ ನಡೆದ ಜಿಲ್ಲಾ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲಿ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಲಾಗಿತ್ತು. ಮಂಗಳವಾರವೇ ಅಚ್ಚರಿಯ ಫಲಿತಾಂಶ ದೊರೆಯಿತು. ಹೀಗಾಗಿ, ಏಪ್ರಿಲ್ 2ರಂದು ಮಂಗಳವಾರವೇ ನಾಮಪತ್ರ ಸಲ್ಲಿಸಲಾಗುವುದು. ಆದಿನ ನಾನೂ ಕೂಡ ಬರುವೆ. ಆ ಬಳಿಕ ಜಿಲ್ಲೆಯಲ್ಲೇ ಇದ್ದುಕೊಂಡು ಉಗ್ರಪ್ಪನವರ ಪರವಾಗಿಯೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವೆ ಎಂದರು.
ಹಾಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ದೇವೇಂದ್ರಪ್ಪ ಅವರು ಕಳೆದ ಚುನಾವಣೆಯಲ್ಲಿ ನನ್ನ ಬಳಿ ಟಿಕೆಟ್ ಕೇಳಿದ್ದರು. ನಾನು ಅವರ ಓದು ಕೇಳಿ ನಿರಾಕರಿಸಿದ್ದೆ. ಈಗ ಶ್ರೀರಾಮುಲು ಅವರ ಗಾಳಕ್ಕೆ ಬಿದ್ದಿದ್ದಾರೆ ಎಂದ ಸಚಿವ ಡಿ.ಕೆ.ಶಿವಕುಮಾರ್, ದೇವೇಂದ್ರಪ್ಪ ಅವರನ್ನು ಗಾಳಕ್ಕೆ ಬಿದ್ದ ಮೀನಿಗೆ ಹೋಲಿಸಿದ್ದಾರೆ.ದೇವೆಂದ್ರಪ್ಪನವರಿಗೆ ಪಾರ್ಲಿಮೆಂಟ್ನಲ್ಲಿ ಮಾತಾಡೋಕೆ ಆಗುತ್ತಾ? ಇದಕ್ಕೆಲ್ಲ ಶಾಸಕರಾದ ಶ್ರೀ ರಾಮುಲು, ಯಡಿಯೂರಪ್ಪ ಅವರೇ ಉತ್ತರಿಸಬೇಕು ಎಂದು ಟೀಕಿಸಿದರು.
ದೇವೇಂದ್ರಪ್ಪ ಅಭ್ಯರ್ಥಿ ಆಗುತ್ತಿದ್ದಂತೆ ಅಬಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕರೆ ಬರುತ್ತಿದೆಯಂತೆ.ಆದರೆ ಬಳ್ಳಾರಿಯಲ್ಲಿ ಮತ್ತೊಮ್ಮೆ ವಸೂಲಿ ರಾಜಕಾರಣ ಮಾಡಲು ಬಿಡುವುದಿಲ್ಲ. ಇಲ್ಲಿನ ಪರಿಸರ ನಂಗೆ ತುಂಬ ಇಷ್ಟ. ಬಳ್ಳಾರಿ ರಿಸರ್ವೇಶನ್ ಜನರಲ್ ಆಗಿದ್ದರೆ ನಾನು ಇಲ್ಲಿಂದಲೇ ಸ್ಪರ್ಧಿಸುತ್ತೇನೆ. ಮುಂದೆ ಒಮ್ಮೆ ಬದಲಾವಣೆಯಾದರೆ, ನನಗೂ ಆಯಸ್ಸು ಇದ್ದರೆ ಖಂಡಿತ ಇಲ್ಲಿಂದಲೇ ನಿಲ್ಲುತ್ತೇನೆ. ನೀವೆಲ್ಲ ನನ್ನನ್ನು ಗೆಲ್ಲಿಸಬೇಕು ಎಂದರು.
ತಮ್ಮನ್ನು ಕೆಂಪೇಗೌಡರಿಗೆ ಹೋಲಿಸಿಕೊಂಡ ಡಿಕೆಶಿ:
ಸಮಾವೇಶದಲ್ಲಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ಮಾಡಿದ ಡಿ.ಕೆ.ಶಿವಕುಮಾರ್ ತಮ್ಮನ್ನು ಕೆಂಪೇಗೌಡರಿಗೆ ಹೋಲಿಸಿ ಕೊಂಡರು. ಕನಕಪುರ ಗೌಡ್ರು ಕಲ್ಲು ಒಡೆದುಕೊಂಡು ಇರೋದು ಬಿಟ್ಟು ಬಳ್ಳಾರಿಗೆ ಯಾಕೆ ಬಂದಿದ್ದಾರೆ?. ಏನು ಸಂಬಂಧ? ಎಂದು ಶ್ರೀರಾಮುಲು ಉಪಚುನಾವಣೆ ವೇಳೆ ಹೇಳಿದ್ದರು. ನೆನಪಿರಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಕೆಂಪೇಗೌಡರು ಒಬ್ಬ ಸಾಮಂತ ರಾಜರಾಗಿದ್ದರು. ಅವರು ಹಂಪಿಗೆ ಬಂದು ಕುಸ್ತಿ ಆಡಿ ಗೆದ್ದು, ಕೃಷ್ಣದೇವರಾಯರಿಂದಕಂಠಿ ಹಾರ ಪಡೆದಿದ್ದರು.ಹಾಗೇ ನಾನೂ ಬಳ್ಳಾರಿಗೆ ಬಂದಿದ್ದೇನೆ ಎಂದರು.
ಬಳ್ಳಾರಿಯ ಕೋಟೆ ಮಲ್ಲೇಶ್ವರನಿಗೆ ಹೋಗಿ ಚುನಾವಣಾ ಯುದ್ಧ ಗೆಲ್ಲಿಸುವಂತೆ ಬೇಡಿಕೊಂಡಿದ್ದೆ. ಅದೇ ರೀತಿ ಗೆದ್ದೆ ಕೂಡ. ಉಗ್ರಪ್ಪನ ಗೆಲುವು ನನಗೆ ನೀವು ಕೊಟ್ಟ ಕಂಠಿಹಾರ ಎಂದು ಹೇಳಿದರು.ಹೆಣ ಹೊರೋನೂ ನಾನೇ, ಪಲ್ಲಕ್ಕಿ ಹೊರೋನೂ ನಾನೇ ಎಂದುಅತೃಪ್ತ ಶಾಸಕ ನಾಗೇಂದ್ರ ಅವರಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು. ಬಳ್ಳಾರಿಯ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದೇವೆ. ನಾಗೇಂದ್ರ ಕೂಡ ನಮ್ಮವರೇ. ಫೋನ್ ಮಾಡಿ ಮಾತನಾಡಿದ್ದೇನೆ. ಸಂಜೆ ಅವರ ಮನೆಗೇ ಹೋಗಿ ಭೇಟಿ ಮಾಡುತ್ತೇನೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಉಗ್ರಪ್ಪ ಪೂಜಾರಿಯಂತೆ.ಭಕ್ತರ ಮನಸಿನ ಬೇಡಿಕೆಯನ್ನು ದೇವರಿಗೆ ತಲುಪಿಸಲು ದೇವಸ್ಥಾನಗಳಲ್ಲಿ ಪೂಜಾರಿಗಳು ಇರುತ್ತಾರೆ. ನಾವು ಹೋದಾಗ ಅವರೇ ನಮ್ಮ ಪರವಾಗಿ ಪೂಜೆಗಳನ್ನು ಮಾಡಿ, ಬೇಡಿಕೆಗಳನ್ನು ದೇವರಿಗೆ ತಿಳಿಸುತ್ತಾರೆ. ಹಾಗೇ ಉಗ್ರಪ್ಪನವರು ಇಲ್ಲಿನವರ ಬೇಡಿಕೆಗಳ ಬಗ್ಗೆ ಪಾರ್ಲಿಮೆಂಟ್ನಲ್ಲಿ ಧ್ವನಿ ಎತ್ತುತ್ತಾರೆ. ಬಳ್ಳಾರಿಯೆಂಬ ಗುಡಿಗೆ ಉಗ್ರಪ್ಪನವರು ಪೂಜಾರಿ ಎಂದು ಹೇಳಿದರು. ಹಾಗೇ ಏಪ್ರಿಲ್ 2ರಂದು ನಾಮಪತ್ರ ಸಲ್ಲಿಸುವಂತೆ ಅವರಿಗೆ ಸೂಚಿಸಿದರು.