ಬಳ್ಳಾರಿ: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ನಗರದ ಹೊಸಪೇಟೆ ರಸ್ತೆಯಲ್ಲಿ ಮೀನುಗಾರಿಕೆ ಇಲಾಖಾ ಆವರಣದಲ್ಲಿ ಮತ್ಸ್ಯದರ್ಶಿನಿ ಫ್ಯಾಮಿಲಿ ರೆಸ್ಟೋರೆಂಟ್ ಅನ್ನು ಆರಂಭಿಸಿದೆ.
ಇಲ್ಲಿ ನಾನಾ ಬಗೆಯ ಮೀನಿನ ವಿವಿಧ ಖಾದ್ಯಗಳನ್ನು ಸವಿಯಲು ಜನರ ದಂಡೇ ಹರಿದು ಬರುತ್ತಿದೆ. ಏಕೈಕ ಮತ್ಸ್ಯದರ್ಶಿನಿ ಹೋಟೆಲ್ ಇರುವ ಕಾರಣ ಎಲ್ಲಿಲ್ಲದ ಬೇಡಿಕೆ. ಅಲ್ಲದೆ, ಇಲ್ಲಿ ಕಾರ್ಲೆ ಮೀನನ್ನು ಹೆಚ್ಚಾಗಿ ಸವಿಯುತ್ತಾರೆ.
ಎರಡು ದಿನಕ್ಕೊಮ್ಮೆ 100 ಕೆ.ಜಿ ಮೀನು ತರಿಸಿಕೊಳ್ಳಲಾಗುತ್ತದೆ. ಫುಲ್ಮೀಲ್ಸ್ಗೆ ₹ 140, ಮಿನಿ ಮೀಲ್ಸ್ಗೆ ₹ 50 ದರ ನಿಗದಿಪಡಿಸಿದ್ದಾರೆ ಎಂದು ರೆಸ್ಟೋರೆಂಟ್ ಉದ್ಯೋಗಿ ರಾಜಶೇಖರ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ಮಾದರಿಯಲ್ಲೇ ಇಲ್ಲಿ ಮತ್ಸ್ಯದರ್ಶಿನಿ ಫ್ಯಾಮಿಲಿ ರೆಸ್ಟೋರೆಂಟ್ ಪ್ರಾರಂಭಿಸುವ ಇರಾದೆ ಮೀನುಗಾರಿಕೆ ಇಲಾಖೆಗೆ ಇತ್ತು. ಹೀಗಾಗಿ, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಈ ರೆಸ್ಟೋರೆಂಟ್ ಅನ್ನು ಆರಂಭಿಸಲಾಗಿದೆ. ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ನೀಡಲಿದ್ದೇವೆ ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾ ಯಕ ನಿರ್ದೇಶಕ ಶಿವಣ್ಣ ತಿಳಿಸಿದ್ದಾರೆ.