ಬಳ್ಳಾರಿ : ಕೋವಿಡ್ 19 ದಿನೇ ದಿನೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ಹೊಸಪೇಟೆಯ ಎಸ್.ಆರ್. ಕಾಲೋನಿಯ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಹರಡಿದೆ ಎಂದು ತಿಳಿಯುತ್ತಿದ್ದಂತೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು ಹೊರ ಬರದೆ ಮನೆಯಲ್ಲೇ ಉಳಿದಿದ್ದಾರೆ.
ಮನೆಯಿಂದ ಹೊರ ಬರಬೇಡಿ ಎಂದು ಪೊಲೀಸರು ಎಷ್ಟೇ ಮನವಿ ಮಾಡಿದ್ದರೂ ಜನರು ಮಾತ್ರ ಕ್ಯಾರೆ ಎನ್ನುತ್ತಿರಲಿಲ್ಲ. ಆದರೆ ಇದೀಗ ಜನರು ಸ್ವಲ್ಪ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿದೆ. ಪೊಲೀಸರು ಕೂಡಾ ಇಂದು ಇನ್ನೂ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಮನೆಯಲ್ಲಿರುವವರು ಹೊರಗೆ ಇಣುಕಿ ನೋಡಲಾಗದಂತ ವಾತಾವರಣ ಸೃಷ್ಟಿಯಾಗಿದೆ. ದಿನಬಳಕೆ ವಸ್ತುಗಳನ್ನು ಕೊಳ್ಳಲು ಕೂಡಾ ಜನರು ಹೊರ ಬರುತ್ತಿಲ್ಲ. ರೋಟರಿ ವೃತ್ತ, ಗಾಂಧಿ ಸರ್ಕಲ್ , ಪ್ರಮುಖ ಮಾರುಕಟ್ಟೆ, ಎಂ.ಜಿ. ರೋಡ್ , ವಾಲ್ಮೀಕಿ ವೃತ್ತ ಸೇರಿದಂತೆ ನಗರ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪೌರಕಾರ್ಮಿಕರು ಕೂಡಾ ಮಾಸ್ಕ್ ಹಾಕಿಕೊಂಡೇ ರಸ್ತೆಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಅಲ್ಲಲ್ಲಿ ರಾಸಾಯನಿಕ ಔಷಧಿಯನ್ನು ಸಿಂಪಡಣೆ ಮಾಡಲಾಗುತ್ತಿದೆ. ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಜನರಿಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ.