ಬಳ್ಳಾರಿ: ಜಿಲ್ಲೆ ಮತ್ತು ನೂತನ ವಿಜಯನಗರ ಜಿಲ್ಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕೋವಿಡ್ ವೇಳೆಯಲ್ಲಿ ದಿನಾಂಕ ಮುಗಿದ ಆಹಾರ ಪದಾರ್ಥ ಮಾರಾಟ ಮಾಡೋದನ್ನ ಸಂಪೂರ್ಣವಾಗಿ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರವು ನಿಯಂತ್ರಿಸಿದೆ.
ಕಳೆದೊಂದು ವರ್ಷದ ಅವಧಿಯಲ್ಲಿ ಮಹಾಮಾರಿ ಕೋವಿಡ್ನಿಂದಾಗಿ ಇಡೀ ದೇಶವೇ ಸಂಪೂರ್ಣ ಲಾಕ್ಡೌನ್ ಆಗಿತ್ತು. ಆದರೆ, ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಿಕೊಟ್ಟಿದ್ದ ಕೇಂದ್ರ ಸರ್ಕಾರ, ಕೆಲವೇ ಕೆಲ ಮಾರುಕಟ್ಟೆ ವ್ಯವಸ್ಥೆ ಚೌಕಟ್ಟಿನಲ್ಲಿ ಮಾರಾಟಕ್ಕೆ ಅನುಮತಿ ನೀಡಿತ್ತು. ಆದರೂ ಬಿಸ್ಕೆಟ್, ನೂಡಲ್ಸ್ ಸೇರಿದಂತೆ ಇತರೆ ತಿಂಡಿ, ತಿನಿಸುಗಳ ಮಾರಾಟ ಜೋರಾಗಿಯೇ ಇತ್ತು. ಅದು ಕೂಡ ಸೀಮಿತ ಮಾರುಕಟ್ಟೆ ವ್ಯವಸ್ಥೆಯಲ್ಲೇ ಮಾರಾಟ ಮಾಡಬೇಕಿತ್ತು.
ಅದಾದ ಬಳಿಕ, ಅನ್ಲಾಕ್ ಜಾರಿಯಾಯಿತು. ಕಳೆದೊಂದು ವರ್ಷದಿಂದ ಅಂಗಡಿ, ಮುಂಗಟ್ಟುಗಳನ್ನು ತೆಗೆಯಲಾರದ ಹಿನ್ನೆಲೆ ಸಂಗ್ರಹಿಸಿಟ್ಟಿದ್ದ ಬಿಸ್ಕತ್, ನೂಡಲ್ಸ್ ಸೇರಿದಂತೆ ನಾನಾ ತೆರನಾದ ತಿಂಡಿ, ತಿನಿಸುಗಳ ಮೇಲೆ ಮುದ್ರಿತವಾಗಿದ್ದ ದಿನಾಂಕದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ, ಕೆಲವರು ಅವುಗಳನ್ನ ಹೊರಗಡೆ ಚೆಲ್ಲಿದರೆ, ಇನ್ನೂ ಕೆಲವರು ಬಿಡಿಬಿಡಿಯಾಗಿ ವಿಂಗಡಿಸಿ ಮಾರಾಟಕ್ಕೆ ಮುಂದಾಗಿರೋದು ಕೂಡ ಬೆಳಕಿಗೆ ಬಂದಿದೆ.
ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಬಳ್ಳಾರಿ ಹಾಗೂ ಹೊಸಪೇಟೆ ತಾಲೂಕಿನ ಅಂಕಿತ ಅಧಿಕಾರಿಗಳು ವಿಶೇಷ ತಂಡಗಳನ್ನು ರಚನೆ ಮಾಡಿ ದಿನಾಂಕ ಮುಕ್ತಾಯಗೊಂಡ ಆಹಾರ ಪದಾರ್ಥಗಳು ಮಾರಾಟ ಆಗದಂತೆ ನೋಡಿಕೊಳ್ಳಲು ಮುಂದಾದ್ರು. ಅದರಿಂದ ಗಣನೀಯ ಪ್ರಮಾಣದಲ್ಲಿ ದಿನಾಂಕ ಮುಕ್ತಾಯಗೊಂಡಿರೋ ಆಹಾರ ಪದಾರ್ಥಗಳನ್ನ ಮಾರಾಟ ಮಾಡೋದು ಕಮ್ಮಿಯಾಗಿರೋದು ಬೆಳಕಿಗೆ ಬಂದಿದೆ. ಹೀಗಾಗಿ, ಬೆರಳೆಣಿಕೆಯಷ್ಟು ಮಾತ್ರ ಕೇಸ್ಗಳು ಪತ್ತೆಯಾಗಿರೋದು ಕೂಡ ಇದಕ್ಕೆ ಪುಷ್ಟಿ ನೀಡುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಪ್ರಾಧಿಕಾರದ ಪ್ರಭಾರ ಅಂಕಿತ ಅಧಿಕಾರಿ ಡಾ.ಅಬ್ದುಲ್ ಅವರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕೇವಲ ಏಳು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇವುಗಳಲ್ಲಿ ದಿನಾಂಕ ಮುಗಿದಿರುವ ಆಹಾರ ಪದಾರ್ಥಗಳನ್ನ ಮಾರಾಟ ಮಾಡಿರೋದು ಮಾತ್ರ ಕಂಡು ಬಂದಿಲ್ಲ ಎಂದು ತಿಳಿಸಿದರು.
ಕಳಪೆಮಟ್ಟದ ಆಹಾರ ಪದಾರ್ಥ ಮಾರಾಟ, ಅನ್ ಸೇಫ್ ಹಾಗೂ ಮಿಸ್ ಮ್ಯಾಚ್ ಸೇರಿದ ಆಹಾರ ಪದಾರ್ಥಗಳನ್ನ ಸಂಗ್ರಹಿಸಿಟ್ಟಿರೋದು ಈ ಕೇಸ್ಗಳಲ್ಲಿ ಪತ್ತೆಯಾಗಿವೆ. ಇದಲ್ಲದೇ, ಉಭಯ ಜಿಲ್ಲೆಯ ಎಲ್ಲ ಮಹಲ್, ಅಂಗಡಿ- ಮುಂಗಟ್ಟುಗಳಲ್ಲಿ ಮಾರಾಟಕ್ಕೆ ಯೋಗ್ಯವಲ್ಲ (ನಾಟ್ ಫಾರ್ ಸೇಲ್) ಎಂಬ ನಾಮಫಲಕವನ್ನ ತೂಗು ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ ದಿನಾಂಕ ಮುಗಿದ ಆಹಾರ ಪದಾರ್ಥಗಳ ಕುರಿತು ಮಾಲೀಕರೇ ಜಾಗೃತಿ ಮೂಡಿಸುತ್ತಿದ್ದಾರೆ. ದಿನಾಂಕ ಮುಗಿದ ಆಹಾರ ಪದಾರ್ಥಗಳನ್ನ ಮಾರಾಟ ಮಾಡೋದು ಈವರೆಗೂ ಕಂಡುಬಂದಿಲ್ಲ ಎಂದು ಡಾ.ಅಬ್ದುಲ್ ಮಾಹಿತಿ ನೀಡಿದರು.