ಬೆಂಗಳೂರು: ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದ್ದನ್ನು ಬಿಟ್ಟರೆ ಬಿಜೆಪಿ ಸರ್ಕಾರ ಬೇರೇನೂ ಮಾಡಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ನಿಯಮ 69ರಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕವನ್ನು ಸರ್ಕಾರ ಮರೆತಿದೆ. ಕಲ್ಯಾಣ ಕರ್ನಾಟಕ ಯಾವುದೇ ರೀತಿ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಿರುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸದಸ್ಯರ ನೇಮಕವಾಗಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ನೀಡುವುದಾಗಿ ಸಿಎಂ ಘೋಷಿಸಿದ್ದರು. ಆದರೆ, ಈಗ 378 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಹೆಚ್ಚೆಂದರೆ ಇನ್ನು 200 ಕೋಟಿ ರೂ. ಖರ್ಚಾಗಬಹುದು. ಈ ರೀತಿಯಾದರೆ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನ 371ಜೆ ಅಡಿಯಲ್ಲಿ ನಮ್ಮ ಸರ್ಕಾರವಿದ್ದಾಗ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಆದರೆ, ಈ ಸರ್ಕಾರದಲ್ಲಿ ನೇಮಕಾತಿಯೇ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅಭಿವೃದ್ಧಿಯ ವೈಫಲ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂಬ ಕಾರಣಕ್ಕಾಗಿಯೇ ಚರ್ಚೆ ಮಾಡಲು ಸಮಯ ಕೊಡುತ್ತಿಲ್ಲ. ಮತಾಂತರ ನಿಷೇಧ ವಿಧೇಯಕವನ್ನು ತಂದು ಜನರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಉ.ಕರ್ನಾಟಕದವರಾಗಿದ್ದರೂ ಆ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಆಗಿಲ್ಲ: ಸಿದ್ದರಾಮಯ್ಯ
ಸಿಎಂ ಉತ್ತರ ಕರ್ನಾಟಕದವರೇ, ಆದರೆ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಕೇವಲ ವಿಧೇಯಕಗಳನ್ನ ಪಾಸ್ ಮಾಡಿಕೊಂಡರು. ಅದಕ್ಕಾಗಿ ಸರ್ಕಾರ ಅಧಿವೇಶನ ಕರೆದಿತ್ತು ಅಷ್ಟೇ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಕೊಡಲಿಲ್ಲ. ಸುವರ್ಣಸೌಧದಲ್ಲಿ ಬಂದು ಅಧಿವೇಶನ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದರು.
ಬೆಳಗ್ಗೆ ಆಡಳಿತ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ಕೊಟ್ರು. ನಂತರ ನನಗೆ ಅವಕಾಶ ಕೊಟ್ರು. 2 ಗಂಟೆಗೆ ಮುಗಿಸಬೇಕೆಂದರು. ಸರ್ಕಾರದ ಈ ಧೋರಣೆ ಖಂಡಿಸಿ ಪ್ರತಿಭಟಿಸಿದ್ದೇವೆ ಎಂದರು
ಇದನ್ನೂ ಓದಿ: ಉ.ಕ. ಭಾಗಕ್ಕೆ ಅಭಿವೃದ್ಧಿಯಲ್ಲೂ ತಾರತಮ್ಯ, ಸಚಿವ ಸ್ಥಾನಕ್ಕೂ ತಾರತಮ್ಯನಾ?: ಬಿಜೆಪಿ ಶಾಸಕ ನಡಹಳ್ಳಿ ಅಸಮಾಧಾನ!