ಬಳ್ಳಾರಿ: ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ. ಬೆಳಗ್ಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದಾಳೆ.
ಗೋನಾಳ್ ಗ್ರಾಮದ ಸುಕನ್ಯ (11) ಮೃತ ಬಾಲಕಿಯಾಗಿದ್ದಾಳೆ. ಗ್ರಾಮದಲ್ಲಿ ನೀರು ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ನಲ್ಲಿಯಲ್ಲಿ ಬಂದಿರುವ ಕಲುಷಿತ ನೀರು ಸೇವಿಸಿರುವುದೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ವಾಂತಿ ಬೇಧಿಯಿಂದ ಅಸ್ವಸ್ಥರಾಗಿ, ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀರಾಮರಂಗಾಪುರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರು ಮತ್ತು ಗ್ರಾ.ಪಂ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ.
ಈ ನಡುವೆ ತೀವ್ರ ಅಸ್ವಸ್ಥಗೊಂಡ ಬಾಲಕಿ ಪ್ರಾಣ ಬಿಟ್ಟಿದ್ದಾಳೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ಹರಿಯುವ ಕಲುಷಿತ ನೀರು ಗ್ರಾಪಂ ಸರಬರಾಜು ಮಾಡುವ ನಲ್ಲಿಗಳಲ್ಲಿ ಬಂದಿರುವುದರಿಂದ ಜನರಲ್ಲಿ ವಾಂತಿ-ಭೇದಿ ಹರಡುವಂತಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿಲ್ಪರಾಣಿ ಸೇರಿದಂತೆ ಆರೋಗ್ಯ ಅಧಿಕಾರಿಗಳು ಗೋನಾಳ್ ಗ್ರಾಮದಲ್ಲಿ ಮನೆ ಮನೆಗೆ ತೆರಳಿ, ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ವಾಂತಿ-ಭೇದಿ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯಲ್ಲಿ ಗ್ರಾಪಂ ಹಾಗೂ ಆರೋಗ್ಯ ಅಧಿಕಾರಿಗಳು ಕ್ರಮವಹಿಸಿದ್ದಾರೆ.
ಇದನ್ನೂ ಓದಿ: ಮಣ್ಣನ್ನು ಬಳಸಿ ನಕಲಿ ರಸಗೊಬ್ಬರ ತಯಾರಿಕೆ.. ಮೈಸೂರಲ್ಲಿ ಬಯಲಾಯ್ತು ದುಷ್ಕೃತ್ಯ