ಬಳ್ಳಾರಿ: ಹೊಸಪೇಟೆ ನಗರ ಬಳಿಯ ವಿಜಯನಗರ ಕಾಲದ ಜಂಭುನಾಥ ಲೋಹಾದ್ರಿ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಶ್ರಾವಣ ಮಾಸದ ನಿಮಿತ್ತ ಜಂಬುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲು ತೆರಳುತ್ತಿರುವ ಭಕ್ತರ ಮನದಲ್ಲಿ ಭಯ ಆವರಿಸಿದೆ.
ಈ ಜಂಭುನಾಥ ಗುಡ್ಡದ ನಡುರಸ್ತೆಯಲ್ಲೇ ಚಿರತೆ ಕಂಡುಬಂದಿದ್ದರಿಂದ ಕೆಲ ಭಕ್ತರು ಜಂಬುನಾಥಸ್ವಾಮಿಯ ದರ್ಶನ ಪಡೆಯದೇ ಹಿಂತಿರುಗಿದ್ದಾರೆ. ಈ ಗುಡ್ಡದ ಕೆಳಭಾಗದಲ್ಲೇ ಜಂಬುನಾಥಹಳ್ಳಿ ಗ್ರಾಮವಿದ್ದು, ಇಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಸರ್ಕಾರಿ ಆದರ್ಶ ವಿದ್ಯಾಲಯ, ಸರ್ಕಾರಿ ಪ್ರಾಥಮಿಕ ಶಾಲೆ, ಮೆಟ್ರಿಕ್ ನಂತರದ ವಸತಿ ನಿಲಯಗಳು, ಐಟಿಐ ಕಾಲೇಜು ಕೂಡ ಇದೇ ವ್ಯಾಪ್ತಿಯಲ್ಲಿ ಇರುವುದರಿಂದ ಜನರು ಆತಂಕದಲ್ಲಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಶೀಘ್ರವೇ ಕ್ರಮವಹಿಸಬೇಕು. ಜಂಭುನಾಥ ದೇಗುಲಕ್ಕೆ ಬರುವ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ಭದ್ರತೆ ಕಲ್ಪಿಸಬೇಕು ಎಂದು ಜಂಬುನಾಥಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.