ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ಅಂದಾಜು 722 ಮಂದಿ (18 ರ ಆಸುಪಾಸಿನವರು) ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಭಯ ಜಿಲ್ಲೆಗಳ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಆ ಪೈಕಿ ಕೆಲವರು ಪತ್ತೆಯಾಗಿ ಪ್ರಕರಣಗಳು ಸುಖಾಂತ್ಯ ಕಂಡಿವೆಯಾದ್ರೂ ಉಳಿದ ಪ್ರಕರಣಗಳು ಪತ್ತೆಯಾಗದೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವಾಲಯ, ಮಾನವ ಕಳ್ಳಸಾಗಣೆಗೆ ಕರ್ನಾಟಕ ರಾಜ್ಯವೇ ಮೂಲ ರಹದಾರಿಯಾಗಿದೆ. ಶ್ರೀಲಂಕಾ, ನೇಪಾಳ, ಅಪಘಾನಿಸ್ತಾನ ಸೇರಿದಂತೆ ವಿವಿಧೆಡೆ ಮಾನವ ಕಳ್ಳಸಾಗಣಿಕೆ ಕರ್ನಾಟಕದ ಮೂಲಕವೇ ನಡೆಯುತ್ತಿದೆ ಎಂದಿದೆ. ಈ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಎಚ್ಚರಿಕೆ ನೀಡಿದೆ.
ಇನ್ನೊಂದೆಡೆ ಆಂಧ್ರಪ್ರದೇಶ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿರುವ ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಕೂಡ ನಾಪತ್ತೆಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ತಿಂಗಳಲ್ಲಿ (ಜುಲೈ 27ರೊಳಗೆ) 25 ಮಂದಿ, ಜೂನ್ ತಿಂಗಳಲ್ಲಿ 13 ಮಂದಿ ನಾಪತ್ತೆಯಾಗಿದ್ದು, ಒಬ್ಬರೂ ಪತ್ತೆಯಾಗಿಲ್ಲ. ನಾಪತ್ತೆಯಾದವರ ಸಂಖ್ಯೆ ಇನ್ನೂ ಹೆಚ್ಚಿದ್ದು, ಪೊಲೀಸ್ ಇಲಾಖೆಯಲ್ಲಿ ಸಮರ್ಪಕವಾಗಿ ಪ್ರಕರಣ ದಾಖಲಾಗಿಲ್ಲ ಎಂಬ ಆರೋಪವಿದೆ.
ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕುಗಳು ನೆರೆಯ ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿವೆ. ಈ ಭಾಗದಲ್ಲಿ ನಾಪತ್ತೆಯಾದವರ ಪೈಕಿ ಬಹುತೇಕರು ಆಂಧ್ರಪ್ರದೇಶದ ನಾನಾ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.
ಈ ವರೆಗೆ ಪತ್ತೆಯಾಗದ 107 ಮಂದಿ:
ಕಳೆದ ಮೂರು ವರ್ಷಗಳಲ್ಲಿ ಬಳ್ಳಾರಿ-ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟವರು 722 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ 107 ಮಂದಿ ಸುಳಿವೇ ಸಿಕ್ಕಿಲ್ಲ. ಇಷ್ಟು ದಿನವಾದ್ರೂ ಅವರ ಸುಳಿವು ಸಿಗದಿರುವುದು ಅನುಮಾನ ಮೂಡಿಸಿದೆ. 2019-20ನೇ ಸಾಲಿನಲ್ಲಿ ನಾಪತ್ತೆಯಾದ 263 ಮಂದಿಯಲ್ಲಿ 221 ಮಂದಿ ಪತ್ತೆಯಾಗಿದ್ದಾರೆ. ಉಳಿದ 42 ಮಂದಿ ಸುಳಿವು ಪತ್ತೆಯಾಗಿಲ್ಲ.
2020-21ರಲ್ಲಿ 301 ಮಂದಿ ಪೈಕಿ 252 ಪತ್ತೆಯಾದರೆ, 49 ಮಂದಿಯ ಸುಳಿವಿಲ್ಲ. 2021-22ನೇ ಸಾಲಿನಲ್ಲಿ ಜುಲೈವರೆಗೆ 158 ಮಂದಿ ನಾಪತ್ತೆಯಾಗಿದ್ದು, 138 ಮಂದಿ ಪತ್ತೆಯಾಗಿದ್ದಾರೆ. 2020 ರಲ್ಲಿ ನಾಪತ್ತೆಯಾದ 68 ಮಕ್ಕಳಲ್ಲಿ 65, 2021ರಲ್ಲಿ 40 ರ ಪೈಕಿ 25 ಮಕ್ಕಳು ಮಾತ್ರ ಪತ್ತೆಯಾಗಿದ್ದಾರೆ. ನಾಪತ್ತೆ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕಿದೆ ಎಂಬ ಆಗ್ರಹ ಕೇಳಿ ಬಂದಿದೆ.
ಇನ್ನು ಉಭಯ ಜಿಲ್ಲೆಗಳಲ್ಲಿ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಜಾಗೃತಿ ವಹಿಸಿ, ನಾಪತ್ತೆಯಾದವರ ಪತ್ತೆಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆಂಧ್ರಪ್ರದೇಶ ರಾಜ್ಯದ ಗಡಿಭಾಗಕ್ಕೆ ಈ ಜಿಲ್ಲೆಗಳು ಹೊಂದಿಕೊಂಡಿರುವುದರಿಂದ ಮಾನವ ಕಳ್ಳ ಸಾಗಣೆ ಜಾಲ ಸಕ್ರಿಯವಾಗಿರುವ ಅನುಮಾನ ಕಾಡುತ್ತಿದೆ. ಪೊಲೀಸರು ಸಮಗ್ರ ತನಿಖೆ ನಡೆಸಬೇಕೆಂದು ಮಹಿಳಾ ಹೋರಾಟಗಾರ್ತಿ ಈಶ್ವರಿ ಆಗ್ರಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ನಾಪತ್ತೆಯಾದವರನ್ನ ಹುಡುಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅನೇಕರು ಪತ್ತೆಯಾಗಿದ್ದಾರೆ. ಆದರೆ, ಈವರೆಗೆ ಮಾನವ ಕಳ್ಳ ಸಾಗಣೆಯಂತಹ ಪ್ರಕರಣಗಳು ಪತ್ತೆಯಾಗಿಲ್ಲ ಎಂದಿದ್ದಾರೆ.