ಹೊಸಪೇಟೆ : ತಾಲೂಕಿನ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗದ್ದುಗೆ ಏರಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತೆರೆ ಮರೆಯಲ್ಲಿ ಸಿದ್ಧತೆ ನಡೆಸಿವೆ. ಈಗಾಗಲೇ ತಾಲೂಕ ಅಡಳಿತ ಮೀಸಲಾತಿ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಯಾರ ಪಾಲಿಗೆ ಎಷ್ಟು ಗ್ರಾಮ ಪಂಚಾಯತ್‌ಗಳು ಸೇರುತ್ತವೆ ಎಂಬುದರ ಲೆಕ್ಕಾಚಾರ ನಡೆಯುತ್ತಿದೆ.
ಹೊಸಪೇಟೆ ತಾಲೂಕಿನಲ್ಲಿ ಒಟ್ಟು 14 ಗ್ರಾಪಂಗಳು ಬರುತ್ತವೆ. ಅದರಲ್ಲಿ ಸೀತರಾಮ ತಾಂಡ ಗ್ರಾಪಂ ಚುನಾವಣೆಯು ಒಂದು ವರ್ಷದ ಮುಂಚೆ ನಡೆದಿತ್ತು. ಈಗ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಮತ್ತು ಉಪಾದ್ಯಕ್ಷ ಚುನಾವಣೆ ಪ್ರಕ್ರಿಯೆ ನಡೆಯಲಿದೆ.
ಚುನಾಯಿತ ಸದಸ್ಯರಿಗೆ ಪ್ರವಾಸ ಭಾಗ್ಯ : ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಪ್ರವಾಸ ಭಾಗ್ಯ ಕಲ್ಪಿಸಿಕೊಟ್ಟಿದೆ. ಆ ಅಭ್ಯರ್ಥಿಗಳನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿ ಬಳಿಕ ಕ್ಷೇತ್ರಕ್ಕೆ ಕರೆಸಿಕೊಳ್ಳುವ ಆಲೋಚನೆಯಲ್ಲಿದೆ. ಇನ್ನು, ಕಾಂಗ್ರೆಸ್ ರಹಸ್ಯವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಕಸರತ್ತು ನಡೆಸಿದೆ.
ಈಟಿವಿ ಭಾರತ್ ಜೊತೆ ಹೊಸಪೇಟೆಯ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ ಮಾತನಾಡಿ, ಬಿಜೆಪಿ ಬೆಂಬಲಿ ಚುನಾಯಿತು ಅಭ್ಯರ್ಥಿಗಳು ಪ್ರವಾಸಕ್ಕೆ ತೆರಳಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಆಗಲು ಕಾತುರರಾಗಿದ್ದಾರೆ. ವಿಜಯನಗರ ವಿಧಾನಸಭಾ ವ್ಯಾಪ್ತಿಗೆ ಬರುವ 10 ಗ್ರಾಪಂಗಳಲ್ಲಿ ಬಿಜೆಪಿ ಪಕ್ಷದ ಚುನಾಯಿತರು ಮೇಲುಗೈ ಸಾಧಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹೆಚ್ ಎನ್ ಎಫ್ ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಏಳು ಗ್ರಾಪಂಗಳಲ್ಲಿ ಕಾಂಗ್ರೆಸ್ ತೆಕ್ಕೆಗೆ ಬರಲಿವೆ. ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್ ಪಕ್ಷ ಜನರ ಬೆಂಬಲಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.