ಹೊಸಪೇಟೆ (ವಿಜಯನಗರ) : ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ತಗ್ಗುತ್ತಿದೆ. ಕಳೆದ ಎರಡು ತಿಂಗಳಿನಲ್ಲಿ ವೈದ್ಯರಿಂದ ಹಿಡಿದು ಡಿ ಗ್ರೂಪ್ ನೌಕರರ ತನಕ ಆರೋಗ್ಯ ಸಿಬ್ಬಂದಿ ಮಾಡಿರುವ ಕಾರ್ಯವನ್ನು ಯಾರೂ ಮರೆಯುವಂತಿಲ್ಲ. ಕುಟುಂಬಸ್ಥರಿಂದ ದೂರವಾಗಿ, ತಮ್ಮ ಪ್ರಾಣ ಪಣಕ್ಕಿಟ್ಟು ಜನರ ಜೀವ ರಕ್ಷಿಸುವಲ್ಲಿ ಶ್ರಮಿಸಿದ ಆರೋಗ್ಯ ಕಾರ್ಯಕರ್ತರ ಸೇವೆ ಮಾತ್ರ ಶ್ಲಾಘನೀಯ.
ವಿಜಯನಗರ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನ ಹಡಗಲಿಯಲ್ಲಿ ಸುಮಾರು 200 ವೈದ್ಯರು ಕೋವಿಡ್ ಕರ್ತವ್ಯವನ್ನು ನಿಭಾಯಿಸಿದ್ದಾರೆ. ತಾಲೂಕು ವೈದ್ಯರು, ಆರೋಗ್ಯ ನಿರಿಕ್ಷಣಾ ಅಧಿಕಾರಿಗಳು, ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಶುಶ್ರೂಕಿಯರು, ಪ್ರಯೋಗಾಲಯ ತಜ್ಞರು, ಆ್ಯಂಬುಲೆನ್ಸ್ ಚಾಲಕರು, ಅಂಗನವಾಡಿ, ಆಶಾ ಕಾರ್ಯರ್ತೆಯರ ಸೇವಾ ಕಾರ್ಯ ಹೆಚ್ಚಿನದಾಗಿತ್ತು.
ಕುಟುಂಬದಿಂದ ದೂರ : ಆರೋಗ್ಯ ಸಿಬ್ಬಂದಿ ಕೋವಿಡ್ ಕರ್ತವ್ಯದಲ್ಲಿದ್ದ ವೇಳೆ, ಸುರಕ್ಷತೆಯ ದೃಷ್ಟಿಯಿಂದ ತಿಂಗಳುಗಟ್ಟಲೇ ಕುಟುಂಬದ ಜೊತೆ ಬೆರೆಯಲಿಲ್ಲ. ಅನೇಕ ಮಂದಿ ಆರೋಗ್ಯ ಸಿಬ್ಬಂದಿ ಹಲವು ದಿನಗಳಿಂದ ತಮ್ಮ ಮಕ್ಕಳ ಜೊತೆ ಕೂಡ ಬೆರೆಯದೆ ದೂರವಿದ್ದರು.
ಪಿಪಿಇ ಕಿಟ್ ಧರಿಸುವುದು ಸವಾಲು : ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಿನಪೂರ್ತಿ ಪಿಪಿಇ ಕಿಟ್ ಧರಿಸಿಯೇ ಇರುವುದು ಆರೋಗ್ಯ ಸಿಬ್ಬಂದಿಗೆ ಸವಾಲಿನ ಕೆಲಸವಾಗಿತ್ತು. ಆದರೂ, ಸುರಕ್ಷತೆಯ ದೃಷ್ಟಿಯಿಂದ ಅದು ಅನಿವಾರ್ಯವಾಗಿತ್ತು.
ಕೊರೊನಾ ಲಸಿಕೆ ಸಹಕಾರಿ : ಕೋವಿಡ್ ಮೊದಲನೇ ಅಲೆಯಲ್ಲಿ ಲಸಿಕೆ ಲಭ್ಯವಿರಲಿಲ್ಲ. ಹಾಗಾಗಿ, ವೈದ್ಯರು, ಸಿಬ್ಬಂದಿ ಭಯದಲ್ಲೇ ಕೆಲಸ ಮಾಡಬೇಕಾಗಿತ್ತು. ಆದರೆ, ಎರಡನೇ ಅಲೆಯ ಸಮಯದಲ್ಲಿ ಲಸಿಕೆ ಸಿದ್ಧವಾಗಿದ್ದರಿಂದ ವೈದ್ಯರು ಕೊಂಚ ಆತ್ಮಸ್ಥೈರ್ಯದಿಂದ ಕೆಲಸ ಮಾಡುವಂತಾಯಿತು.
ಕೋವಿಡ್ ಸೋಂಕಿತರಿಗೆ ಹೆರಿಗೆ : ಕೋವಿಡ್ ಒಂದು ಮತ್ತು ಎರಡನೇ ಅಲೆಯ ಅವಧಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸುಮಾರು 50 ಕೋವಿಡ್ ಸೋಂಕಿತರಿಗೆ ಸುರಕ್ಷಿತ ಹೆರಿಗೆ ಮಾಡಿಸಲಾಗಿದೆ. ಕೆಲವರಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿದೆ. ಈ ಸಮಯದಲ್ಲಿ ಸತತ 2 ರಿಂದ 3 ಗಂಟೆ ಪಿಪಿಇ ಕಿಟ್ ಧರಿಸಿಕೊಂಡಿರುವುದು ವೈದ್ಯರಿಗೆ ಸವಾಲಾಗಿತ್ತು.
ಈ ಕುರಿತು 'ಈಟಿವಿ ಭಾರತ'ನೊಂದಿಗೆ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ್ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಸುಮಾರು 200 ವೈದ್ಯರು ಕೋವಿಡ್ ಕರ್ತವ್ಯ ನಿರ್ವಹಿಸಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಲಸಿಕೆ ಇದ್ದಿದ್ದರಿಂದ ವೈದ್ಯರು ಧೈರ್ಯವಾಗಿ ಕೆಲಸ ಮಾಡಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಕೊರೊನಾದಿಂದ ವೈದ್ಯರು ಮೃತಪಟ್ಟಿಲ್ಲ. ಬಳ್ಳಾರಿಯ ವಿಮ್ಸ್ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಕೋವಿಡ್ ವಿರುದ್ಧ ಹೋರಾಟ ಮಾಡಲಾಯಿತು ಎಂದು ಹೇಳಿದ್ದಾರೆ.
ಓದಿ : ಸೋತನೆಂದು ಕೈ ಚೆಲ್ಲಲಿಲ್ಲ ಈ ಸೋದರರು.. ಹಿರೇಕಾಯಿ ಇವರನ್ನೀಗ ಹೀರೊಗಳನ್ನಾಗಿಸಿತು..