ಬಳ್ಳಾರಿ: ನಾಯಕ ಧ್ರುವ ಸರ್ಜಾ ಅಭಿಮಾನಿ ಎಂ.ಜಿ.ಕನಕ ಎಂಬುವರು ಚೆನ್ನೈನ ಕ್ಯಾನ್ಸರ್ ರೋಗಿಗಳ ಆರೈಕೆ ಕೇಂದ್ರಕ್ಕೆ ತಲೆಗೂದಲನ್ನು ದೇಣಿಗೆ ನೀಡಿದ್ದು, ಅಂಚೆಯ ಮೂಲಕ ರವಾನಿಸಿದ್ದಾರೆ.
'ಪೊಗರು' ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಉದ್ದನೆಯ ಗಡ್ಡ, ತಲೆ ಕೂದಲು ಬಿಟ್ಟಿರುವ ಹಿನ್ನೆಲೆಯಲ್ಲಿ ಥೇಟ್ ಅವರನ್ನೇ ಹೋಲುವ ಅಭಿಮಾನಿ ಎಂ.ಜಿ. ಕನಕ ಅವರು ಸಹ ತಮ್ಮ ಗಡ್ಡ, ತಲೆ ಕೂದಲನ್ನು ಕತ್ತರಿಸದೇ ಬಿಟ್ಟಿದ್ದರು. ಇದೀಗ ಪೊಗರು ಸಿನಿಮಾ ಬಿಡುಗಡೆಯಾದ ಬಳಿಕ ಕೂದಲನ್ನು ತೆಗೆಸುವ ನಿರ್ಧಾರ ಕೈಗೊಂಡಿದ್ದರು. ಅದರಂತೆ ನಿನ್ನೆ ಹೇರ್ ಸಲೂನ್ಗೆ ಹೋಗಿದ್ದ ಅಭಿಮಾನಿ ಕನಕ, ತಲೆ ಕೂದಲನ್ನು ಕತ್ತರಿಸಿ, ಅದನ್ನು ಕವರ್ನಲ್ಲಿ ಹಾಕುವ ಮುಖೇನ ಚೆನ್ನೈನ ಕ್ಯಾನ್ಸರ್ ರೋಗಿಗಳ ಪೋಷಣೆಯ ಖಾಸಗಿ ಕಂಪನಿಗೆ ಅಂಚೆಯ ಮೂಲಕ ರವಾನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂ.ಜಿ. ಕನಕ ಅವರು, ಈಗ ಪೊಗರು ಸಿನಿಮಾದ ಬಿಡುಗಡೆಯಾಗಿದೆ. ಹೀಗಾಗಿ ಚೆನ್ನೈನ ಕ್ಯಾನ್ಸರ್ ರೋಗಿಗಳ ಪೋಷಣಾ ಕೇಂದ್ರಕ್ಕೆ ತಲೆಗೂದಲನ್ನು ನೀಡೋದಕ್ಕೆ ಮುಂದಾಗಿರುವೆ. ನಾನು ಯಾವುದಾದರೊಂದು ದೇಗುಲದಲ್ಲಿ ಹರಕೆ ತೀರಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ, ಕ್ಯಾನ್ಸರ್ ರೋಗಿಗಳಿಗೆ ನನ್ನ ತಲೆ ಗೂದಲು ಉಪಯೋಗ ಆಗಲೆಂದೇ ಈ ನಿರ್ಧಾರ ಕೈಗೊಂಡಿರುವೆ ಎಂದು ತಿಳಿಸಿದರು.