ಬಳ್ಳಾರಿ : ಐತಿಹಾಸಿಕ ಬಳ್ಳಾರಿ ಗುಡ್ಡದ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲಿನ ಸಂಜಯ ಗಾಂಧಿ ನಗರದಲ್ಲಿನ ಗುಡ್ಡದಲ್ಲಿ ಚಿರತೆ ಕುಳಿತಿರುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ.
ಸಂಜೆಯಾದರೆ ಸಾಕು, ಸಂಜಯಗಾಂಧಿ ನಗರದ ಜನರು ಮನೆಗಳ ಬಾಗಿಲು ಹಾಕಿಕೊಳ್ಳುತ್ತಿದ್ದಾರೆ. ಹೊರಬರಲು ಕೂಡ ಭಯ ಪಡುತ್ತಿದ್ದಾರೆ. ಗುಡ್ಡದ ಮೇಲೆ ಚಿರತೆ ಪ್ರತ್ಯಕ್ಷವಾಗಿರುವುದನ್ನು ಡಿಎಫ್‌ಒ ಸಂದೀಪ್ ಸೂರ್ಯವಂಶಿ ಖಚಿತಪಡಿಸಿದ್ದಾರೆ. ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರ್‌ಎಫ್‌ಒ ಮಂಜುನಾಥ್ ಅವರ ನೇತೃತ್ವದ ಅರಣ್ಯ ಅಧಿಕಾರಿಗಳ ತಂಡ ಕಾರ್ಯಾಚರಣೆ ಮಾಡುತ್ತಿದ್ದಾರೆ.
ಚಿರತೆ ಸೆರೆಗೆ ಬೋನ್ ಇಡಲಾಗಿದೆ. ಅದರ ಚಲನವಲನದ ಮೇಲೆ ನಿಗಾ ಇಡಲು 'ನೈಟ್ ಕ್ಯಾಮರಾ'ಗಳನ್ನು ಸಹ ತರಿಸಲಾಗಿದೆ. 'ದ್ರೋಣ್ ಕ್ಯಾಮರಾ'ದ ಮೂಲಕ ಚಿರತೆ ಇರುವ ಸ್ಥಳ ಪತ್ತೆ ಮಾಡಿ ಅರವಳಿಕೆ ಇಂಜೆಕ್ಷನ್ ಹಾಕಿ ಸೆರೆ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ. ಸಂಜಯಗಾಂಧಿ ನಗರದ ಗುಡ್ಡದಲ್ಲಿ ಚಿರತೆ ಕಾಣಿಸಿಕೊಳ್ಳುವುದರಿಂದ ಯಾವ ಕ್ಷಣದಲ್ಲಾದುರೂ ಉರೊಳಗೆ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಜನರಲ್ಲಿ ಆತಂಕ ಮನೆಮಾಡಿದ.
ನಿನ್ನೆಯಿಂದಲೂ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇತ್ತ ಗುಡ್ಡದ ಕೆಳಗೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಿರತೆ ಪ್ರತ್ಯಕ್ಷವಾಗಿರುವ ಸಮೀಪ ಅನಗತ್ಯ ಸಂಚಾರಕ್ಕೆ ಪೊಲೀಸರು ನಿರ್ಬಂಧ ಹಾಕಿದ್ದಾರೆ. ಗುಡ್ಡದ ಮೇಲೆ ಅರಣ್ಯಾಧಿಕಾರಿಗಳು, ಅರವಳಿಕೆ ತಜ್ಞರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು, ನಾವು ಆತಂಕದಿಂದ ಜೀವನ ಸಾಗಿಸುತ್ತಿದ್ದೇವೆ ಅಂತಿದ್ದಾರೆ ಸ್ಥಳೀಯರು.
ಇದನ್ನೂ ಓದಿ : ನಿರಂತರ ಮಳೆ.. ಕೊಡಗುದಲ್ಲಿ ಮೂರು ವರ್ಷಗಳ ಹಿಂದಿನ ಘಟನೆ ಮರುಕಳಿಸುವ ಭೀತಿ