ಬಳ್ಳಾರಿ: ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಬಾಬು, ದೇಶದಲ್ಲಿ ರೈತ ಮತ್ತು ಕಾರ್ಮಿಕರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಕಳೆದ ಮೂರು ತಿಂಗಳಿಂದ ಹೋರಾಟ ಮಾಡುತ್ತಿದ್ದೇವೆ. ದೆಹಲಿಯಲ್ಲಿ ರೈತರು ಕಳೆದ 40 ದಿನಗಳಿಂದ ಹೋರಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ರೈತರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಭೂ ಸುಧಾರಣಾ ಕಾಯ್ದೆ, ವಿದ್ಯುತ್ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು. ಜೊತೆಗೆ ಕೊರೊನಾ ಸಮಯದಲ್ಲಿ ಸಾಕಷ್ಟು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಕುಟುಂಬಕ್ಕೆ 7,500 ರೂಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದರು.
ಬೇಡಿಕೆಗಳು:
- ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು.
- ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು.
- ವಿದ್ಯುತ್ ಮಸೂದೆ 2020ರ ಕಾಯ್ದೆ ಹಿಂದಕ್ಕೆ ಪಡೆಯಬೇಕು.
- ಎಲ್ಲಾ ರೀತಿಯ ಖಾಸಗೀಕರಣ ಕೂಡಲೇ ನಿಲ್ಲಿಸಬೇಕು.
- ಪ್ರತಿ ತಿಂಗಳು 10 ಕೆ.ಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು.
- ಹಳೆ ಪಿಂಚಣಿಯನ್ನು ಪುನಃ ಜಾರಿಗೆ ತರಬೇಕು.
- ಸಾಮಾಜಿಕ ರಕ್ಷಣೆಯನ್ನು ಒದಗಿಸಬೇಕು.
- ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆ ಜಾರಿಗೆ ತರಬೇಕು.
- 200 ದಿನಗಳ ಕೆಲಸ ಮತ್ತು ದಿನಕ್ಕೆ 700 ರೂಪಾಯಿ ವೇತನ ನೀಡಬೇಕು.
- ಆದಾಯ ತೆರಿಗೆ ಮಿತಿಯಿಂದ ಹೊರಗಿರುವ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ 7,500 ರೂಪಾಯಿ ನೀಡಬೇಕು.