ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ ದೇವೇಂದ್ರಪ್ಪನವರ ಪರವಾಗಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಬಳ್ಳಾರಿ ತಾಲೂಕಿನ ಹಲಕುಂದಿಯಲ್ಲಿ ರೋಡ್ ಶೋ ನಡೆಸಿದ ಶಾಸಕ ಶ್ರೀರಾಮುಲು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದ್ದಾರೆ. ಬಳಿಕ, ರೂಪನಗುಡಿ ಹೋಬಳಿ, ಪರಮ ದೇವನಹಳ್ಳಿ, ಮೋಕಾ ಹೋಬಳಿ ಹಾಗೂ ಸಂಗನಕಲ್ಲು ಮತ್ತು ಕೊಳಗಲ್ಲು ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಹೋದ ಕಡೆಯೆಲ್ಲಾ ಶಾಸಕ ಶ್ರೀರಾಮುಲು ಅವರಿಗೆ ಹೂವಿನ ಹಾರ, ತುರಾಯಿ ಹಾಕುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ಬೆದರು ಬೊಂಬೆಯಾದ ದೇವೇಂದ್ರಪ್ಪ:
ಆಯಾ ಗ್ರಾಮ ಹಾಗೂ ಹೋಬಳಿ ಕೇಂದ್ರಗಳ ಸಾರ್ವಜನಿಕ ಸ್ಥಳಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಾಯಿತು. ಅಭ್ಯರ್ಥಿ ದೇವೇಂದ್ರಪ್ಪ ಎರಡು ಕೈಗಳಿಂದ ಮತದಾರರತ್ತ ಕೈಮುಗಿಯುವ ಮೂಲಕ ಬೆದರು ಬೊಂಬೆಯಂತೆ ನಿಂತಿರುವ ದೃಶ್ಯವೂ ಕಂಡು ಬಂತು.
ಕೈ ಅಭ್ಯರ್ಥಿ ಪರ ಮಾಜಿ ಶಾಸಕರ ಭರ್ಜರಿ ಪ್ರಚಾರ
ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರವಾಗಿ ಮಾಜಿ ಶಾಸಕ ಅನಿಲ್ ಹೆಚ್. ಲಾಡ್, ನಗರದ ವಿವಿಧೆಡೆ ಭರ್ಜರಿ ಪ್ರಚಾರ ಕೈಗೊಂಡರು. ಇಲ್ಲಿನ ಅಲ್ಲಂ ವೀರಭದ್ರಪ್ಪ ಕಾಲೊನಿ, ವೀರಭದ್ರೇಶ್ವರ ದೇಗುಲ, ಹೂವಿನ ಮಾರುಕಟ್ಟೆ ಸೇರಿದಂತೆ ಇತರೆಡೆ ಸಂಚರಿಸಿದ ಮಾಜಿ ಶಾಸಕ ಲಾಡ್, ಪಕ್ಷದ ಕರಪತ್ರ ಹಂಚಿಕೆ ಮಾಡುವ ಮೂಲಕ ಮತಯಾಚನೆ ಮಾಡಿದರು.
ನಗರದ ವಿವಿಧ ವಾರ್ಡುಗಳು ಸೇರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಶ್ರಮಿಸಲಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತ ಹಾಕಿ ಎಂದು ಲಾಡ್ ಕೋರಿದರು. ಬಿಜೆಪಿ ಅಭ್ಯರ್ಥಿ ನೀಡುವ ಗರಿಗರಿ ನೋಟು ಪಡೆದು ತಮ್ಮ ಅಮೂಲ್ಯವಾದ ಮತವನ್ನ ಕೈ ಗುರುತಿಗೆ ಒತ್ತಿರಿ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯ ಅಲ್ಲಂ ಪ್ರಶಾಂತ, ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ. ಎಸ್. ಮಹಮ್ಮದ ರಫೀಕ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಸುಂಡಿ ನಾಗರಾಜಗೌಡ ಸೇರಿದಂತೆ ಇತರೆ ಮುಖಂಡರು ಮಾಜಿ ಶಾಸಕ ಅನಿಲ್ ಲಾಡ್ ಅವರಿಗೆ ಸಾಥ್ ನೀಡಿದರು.