ಬಳ್ಳಾರಿ: ರಾಜ್ಯದಲ್ಲಿ ನರೇಗಾ ಕಾಮಗಾರಿಗಳ ಅನುಷ್ಠಾನ ಅತ್ಯಂತ ಸಮರ್ಪಕವಾಗಿ ನಡೆಯುತ್ತಿದ್ದು, ಬಳ್ಳಾರಿ ಇಡೀ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆಗಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ನರೇಗಾ ಯೋಜನೆ ಅಡಿ ಅಂತರ್ಜಲ ಚೇತನ ಯೋಜನೆ ಕಾಮಗಾರಿಗಳ ಪ್ರಾರಂಭೋತ್ಸವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಮುಂಚಿನಂತೆ ಉದ್ಯೋಗ ಖಾತರಿ ಯೋಜನೆಗಳು ಜರುಗುತ್ತಿಲ್ಲ. ಈಗ ಬಂದು ಕೆಲಸ ಮಾಡಿದರೆ 15 ದಿನಗಳಲ್ಲಿ ಅವರವರ ಖಾತೆಗೆ ಹಣ ಬಂದು ಬೀಳುತ್ತದೆ. ಕೂಲಿ ಹಣವನ್ನು ಕೂಡಾ 249 ರೂ.ನಿಂದ 275 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಕೆಲಸಕ್ಕೆ ನಿರ್ದಿಷ್ಟ ಗುರಿ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರು ನರೇಗಾ ಕೆಲಸದಲ್ಲಿ ಅತ್ಯಂತ ಖುಷಿಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ದಿ ಆರ್ಟ್ ಆಫ್ ಲಿವಿಂಗ್ ಜತೆಗೂಡಿ ರಾಜ್ಯದಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಮೂರು ವರ್ಷಗಳಲ್ಲಿಯೇ ಮೂವತ್ತು ವರ್ಷಗಳ ಹಿಂದಿನ ಅಂತರ್ಜಲ ಸ್ಥಿತಿಯನ್ನು ನಾವು ಕಾಣಲಿದ್ದೇವೆ ಎಂಬ ಆಶಯ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ ಪಾವತಿಸುತ್ತಿರುವವರನ್ನು ಹೊರತುಪಡಿಸಿ ಯಾರೇ ಬಂದರೂ ಜಾಬ್ ಕಾರ್ಡ್ ಕೊಟ್ಟು ಅವರಿಗೆ ಉದ್ಯೋಗ ಕೊಡುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ನರೇಗಾ ಅಡಿ ಬದು ನಿರ್ಮಾಣ ಮತ್ತು ಕೃಷಿ ಹೊಂಡಗಳ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಗುರಿ ಇಟ್ಟುಕೊಳ್ಳಬೇಡಿ. ಯಾರು ಕೇಳುತ್ತಾರೆ ಅವರಿಗೆಲ್ಲ ಕೊಡಿ ಎಂದರು.
10662 ಹೆಕ್ಟೇರ್ ಬದು ನಿರ್ಮಾಣ:
ಕಳೆದ ಎರಡು ತಿಂಗಳ ಅವಧಿಯಲ್ಲಿ 10662 ಹೆಕ್ಟೇರ್ ಬದು ನಿರ್ಮಾಣ ಮತ್ತು 1163 ಕೃಷಿ ಹೊಂಡಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ಎಂದು ಜಿಪಂ ಸಿಇಒ ಕೆ.ನಿತೀಶ್ ಸಭೆಗೆ ವಿವರಿಸಿದರು.
ಈ ವರ್ಷ ಕೆರೆ ಹೂಳೆತ್ತುವುದನ್ನು ಸ್ಥಗಿತಗೊಳಿಸಿ ಬದು ನಿರ್ಮಾಣ ಮತ್ತು ಕೃಷಿ ಹೊಂಡ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ವಿವರಿಸಿದ ಜಿಪಂ ಸಿಇಒ, ಕಳೆದ ವರ್ಷ 32 ಕೋಟಿ ರೂ. ಖರ್ಚು ಮಾಡಿ 10533 ಹೆಕ್ಟೇರ್ ಬದು ನಿರ್ಮಾಣ ಮತ್ತು 5 ಕೋಟಿ ರೂ. ವೆಚ್ಚದಲ್ಲಿ 1333 ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿತ್ತು ಎಂದು ವಿವರಿಸಿದರು.
ಇದನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಈಶ್ವರಪ್ಪ, ಈ ವರ್ಷ ಚೆನ್ನಾಗಿ ಮಾಡಿ ಮತ್ತು ಈಗಾಗಲೇ ನಿರ್ಮಾಣ ಮಾಡಲಾದ ಬದುಗಳಡಿ ಗಿಡಗಳನ್ನು ನೆಡಿ ಎಂದರು.