ಬೆಳಗಾವಿ: ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಗುತ್ತಿಗೆದಾರರು ಶೇ.40 ರಷ್ಟು ಪರ್ಸೆಂಟೇಜ್ ಕಾಮಗಾರಿಗೆ ಕೊಡಬೇಕು ಅಂತ ಪತ್ರ ಬರೆದು ಆರೋಪ ಮಾಡಿದ್ದಾರೆ. ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ತನಿಖೆ ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಳಗಾವಿ ನಗರದ ಕಾಂಗ್ರೆಸ್ ಭವನದಿಂದ ಸುವರ್ಣಸೌಧದ ವರೆಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ ಬಳಿಕ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ 10 ಪರ್ಸಂಟ್ ಅಂತಿದ್ರು. ಅದನ್ನೂ ಸೇರಿಸಿ ಪ್ರಧಾನಿ ಮೋದಿ ಅವರು ತನಿಖೆ ಮಾಡಲಿ ಎಂದು ಹೇಳಿದರು.
ಎಲ್ಲ ಅಭಿವೃದ್ಧಿ ಕೆಲಸಗಳು ನಿಂತಿವೆ. ಕೇಂದ್ರದಿಂದ ಪರಿಹಾರ ಬಂದಿಲ್ಲ, ಸತ್ತವರಿಗೆ, ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. 23 ಜಿಲ್ಲೆಯಲ್ಲಿ ನೆರೆ ಬಂದಿದೆ. ಬೆಳೆ ಪರಿಹಾರ ಇನ್ನೂ ನೀಡಿಲ್ಲ. ಬೆಳೆ ಪರಿಹಾರ ಮೂರು ಪಟ್ಟು ಹೆಚ್ಚು ಮಾಡಿ ಎಂದು ಒತ್ತಾಯಿಸುತ್ತೇವೆ ಎಂದರು.
ಕೇಂದ್ರ ಸರ್ಕಾರವನ್ನು ಬಿಟ್ಟು ನೀವೆ ಪರಿಹಾರ ಕೊಡಿ ಅಂತ ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನಾನು ಸ್ವಾಗತ ಮಾಡ್ತೀನಿ. ಹಳೆ ನೆರೆ ಪರಿಹಾರ ನೀಡಿಲ್ಲ. ಈ ವರ್ಷದ ಪರಿಹಾರ ಕೊಟ್ಟಿಲ್ಲ. ಶೇ.40ರಷ್ಟು ಸರ್ಕಾರ ಎಲ್ಲ ಕರಿತಾ ಇದ್ದಾರೆ ಎಂದು ಲೇವಡಿ ಮಾಡಿದರು.
ಸುವರ್ಣ ವಿಧಾನಸೌಧ ಪ್ರವೇಶಿಸಿದ ಟ್ರ್ಯಾಕ್ಟರ್ ರ‍್ಯಾಲಿ
ಸರ್ಕಾರದ ವೈಫಲ್ಯಗಳ ಬಗ್ಗೆ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ಇಂದು ಬೆಳಗಾವಿ ನಗರದ ಕಾಂಗ್ರೆಸ್ ಭವನದಿಂದ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ‍್ಯಾಲಿ ಸುವರ್ಣ ವಿಧಾನಸೌಧ ಪ್ರವೇಶಿಸಿತು.
ಟ್ರ್ಯಾಕ್ಟರ್ ರ‍್ಯಾಲಿಯನ್ನು ಮುಖ್ಯ ರಸ್ತೆಯ ಪ್ರವೇಶದ್ವಾರ ಬಳಿಯೇ ತಡೆಯಲಾಯಿತು. ಸಾಕಷ್ಟು ನೂಕಾಟ ತಳ್ಳಾಟದ ಬಳಿಕ ಕಾಂಗ್ರೆಸ್ ನಾಯಕರನ್ನ ಸುವರ್ಣಸೌಧ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಇದಾದ ಬಳಿಕ ಟ್ರ್ಯಾಕ್ಟರ್ ಮೂಲಕ ಪ್ರವೇಶಿಸಿದ ಕಾಂಗ್ರೆಸ್ ನಾಯಕರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: ಟ್ರ್ಯಾಕ್ಟರ್ ರ‍್ಯಾಲಿ : ಸ್ಪೀಕರ್ ಸೂಚನೆ ಮೇರೆಗೆ ಸುವರ್ಣಸೌಧದ ಗೇಟ್ ಪ್ರವೇಶಿಸಿದ ಕೈ ನಾಯಕರ ಪ್ರತಿಭಟನಾ ಮೆರವಣಿಗೆ