ಚಿಕ್ಕೋಡಿ : ಕಾಗವಾಡ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ರೆಸಾರ್ಟ್‌ನಿಂದ ನಾಪತ್ತೆಯಾಗಿದ್ದಾರೆ ಎಂಬ ಮಾತುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಅವರ ಪಿಎಗಳೂ ಮೊಬೈಲ್‌ಗಳನ್ನ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ (ಬುಧವಾರ) ರಾತ್ರಿ ದಿಢೀರ್ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಎದೆ ನೋವಿನ ಕಾರಣ ನೀಡಿ, ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆೆ ಪಡೆಯುತ್ತಿರುವ ಫೋಟೋಗಳೂ ಕೂಡ ವೈರಲಾಗಿದ್ದವು. ಆದರೆ, ಈ ಹಿಂದೆಯೇ ಅತೃಪ್ತ ಶಾಸಕರ ಪಟ್ಟಿಯಲ್ಲಿ ಶ್ರೀಮಂತ್ ಪಾಟೀಲ್ ಹೆಸರೂ ಕೂಡ ಇತ್ತು ಎನ್ನಲಾಗಿದೆ. ಆದರೆ, ಮೊದಲು ಶ್ರೀಮಂತ್ ಪಾಟೀಲ್ ಅದನ್ನು ನಿರಾಕರಿಸಿದ್ದರಂತೆ.
ಈಗ ಮತ್ತೆ ಹಲವಾರು ಸಂಶಯಗಳು ಸಾರ್ವಜನಿಕ ವಲಯದಲ್ಲಿ ಮೂಡಿದ್ದು, ಅದರಂತೆ ಅಥಣಿ ಮಾಜಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಅಪಹರಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಶ್ರೀಮಂತ್ ಪಾಟೀಲ್ ಹಾಗೂ ಮಾಜಿ ಸಚಿವ ಲಕ್ಷ್ಮಣ ಸವದಿ ಒಟ್ಟಿಗೆ ಇರುವ ಪೋಟೋಗಳೂ ವೈರಲ್ ಆಗುತ್ತಿವೆ.
ಈಗಾಗಲೇ ಕಾಗವಾಡ ಹಾಗೂ ಅಥಣಿ ಮತಕ್ಷೇತ್ರದ ಜನರಲ್ಲಿ ಪಾಟೀಲ್ ಹಾಗೂ ಸವದಿ ಚುನಾವಣೆಯಲ್ಲಿ ಒಬ್ಬರ ವಿರುದ್ದ ಇನ್ನೊಬ್ಬರು ಹೇಳಿಕೆಗಳನ್ನು ಕೊಡುತ್ತಾ ಬಂದವರು. ಈಗ ಇವರಿಬ್ಬರೂ ಕೂಡಿ ಮುಂಬೈಗೆ ಯಾಕೆ ಹೋದರು ಎನ್ನುವ ಪ್ರಶ್ನೆಗಳು ಮೂಡಿವೆ. ಅದರಂತೆ ಶ್ರೀಮಂತ್ ಪಾಟೀಲ್ ಎದೆ ನೋವಿನ ತೊಂದರೆಯಿಂದ ಮುಂಬೈಗೆ ಹೋದ್ರೆ, ವಿಮಾನ ನಿಲ್ದಾಣದಲ್ಲಿ ಏಕೆ ಲಕ್ಷ್ಮಣ ಸವದಿಯನ್ನು ಭೇಟಿಯಾದರು. ಭೇಟಿಯಾದ ಬಳಿಕ ಅವರ ಜೊತೆ ಮುಂಬೈಗೆ ಹೋಗುವ ಅವಶ್ಯಕತೆ ಏನಿತ್ತು ಎಂಬ ಹತ್ತು ಹಲವಾರು ಪ್ರಶ್ನೆಗಳ ಕುರಿತು ಜನರು ಮಾತನಾಡಿಕೊಳ್ಳುತ್ತಿದ್ದಾರೆ.