ಬೆಳಗಾವಿ: ವಿಧಾನ ಪರಿಷತ್ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಲಿ ಪಕ್ಷೇತರ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ದಿಢೀರ್ ಬೆಂಗಳೂರಿಗೆ ತೆರಳಿದ್ದಾರೆ.
ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಕೈನಾಯಕರ ಭೇಟಿಗೆ ವಿವೇಕರಾವ್ ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ವಿವೇಕರಾವ್ ಕೆಲ ಹೊತ್ತು ಚರ್ಚಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಭೇಟಿ ಆಗಲಿದ್ದಾರೆ. ಕಳೆದ ಸಲ ಕೈ ಟಿಕೆಟ್ ತಪ್ಪಿದ್ದಕ್ಕೆ ಪಕ್ಷೇತರರಾಗಿ ಸ್ಪರ್ಧಿಸಿ ವಿವೇಕರಾವ್ ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯಲು ವಿವೇಕರಾವ್ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ಸಿದ್ದರಾಮಯ್ಯ ಕೂಡ ವಿವೇಕರಾವ್ ಪಾಟೀಲಗೆ ಟಿಕೆಟ್ ನೀಡಲು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ವಿವೇಕರಾವ್ ಅವರು ಮಾಜಿ ಸಚಿವ ದಿ. ವಸಂತರಾವ್ ಪಾಟೀಲ ಅವರ ದ್ವಿತೀಯ ಪುತ್ರರಾಗಿದ್ದಾರೆ.
ಈ ಬೆಳವಣಿಗೆ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ವಿವೇಕರಾವ್ ಪಾಟೀಲ, ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಕೈ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.