ಬೆಳಗಾವಿ : ಎರಡು ರಾಷ್ಟ್ರೀಯ ಪಕ್ಷಗಳು, ಕೇವಲ ಮತಬ್ಯಾಂಕ್‌ಗೆ ಸದನದಲ್ಲಿ ಚರ್ಚೆ ಮಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರ ಸಮಸ್ಯೆಗಳಿಗೆ ಪರಿಹಾರ ಬೇಕಿಲ್ಲ.
ಕೇವಲ ಪ್ರಚಾರಕ್ಕಾಗಿ ಅಷ್ಟೇ ಸದನ ನಡೆಸುತ್ತಿದ್ದಾರೆ. ಉ.ಕರ್ನಾಟಕದ ನೀರಾವರಿ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಪರವಾಗಿಲ್ಲ. ಬಿಜೆಪಿ ಸರ್ಕಾರ ದೊಡ್ಡ ಜಾಹೀರಾತು ನೀಡಿ ಕೇಂದ್ರ ಸರ್ಕಾರವನ್ನು ಅಭಿನಂಧಿಸುವ ಕೆಲಸ ಮಾಡುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ. ಈ ಬಗ್ಗೆ ಚರ್ಚೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
'ಹಳೆ ಮೈಸೂರು ಜನ ಸೆಳೆಯಲು ಮೇಕೆದಾಟು ಯೋಜನೆ ಪ್ರಸ್ತಾಪ'
ಪ್ರಶ್ನೋತ್ತರ ಅವಧಿ ಮುಕ್ತಾಯ ನಂತರ ಉತ್ತರ ಕರ್ನಾಟಕ ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚೆಗೆ ಕೇಳಲಾಗಿದೆ. 2013ರಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಮಾಡಿದ್ರು. 5 ವರ್ಷದ ಸರ್ಕಾರದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ 8,000 ಕೋಟಿ ಕೊಟ್ರು. ಆದರೆ, ಅದರಿಂದ ಯಾವುದೇ ಕಾಮಗಾರಿಗಳು ಆಗಿಲ್ಲ. ಕೇವಲ ಗುತ್ತಿಗೆದಾರರ ಅನುಕೂಲಕ್ಕಾಗಿ ಯೋಜನೆಗೆ ಹಣ ಬಿಡುಗಡೆ ಮಾಡಿಕೊಂಡ್ರು. ಮೇಕೆದಾಟು ಯೋಜನೆ ಮೂಲಕ ಹಳೆ ಮೈಸೂರು ಭಾಗದ ಜನರನ್ನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೃಷ್ಣ ಮೇಲ್ದಂಡೆ ಯೋಜನೆ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳ ನಿಲುವು ಏನೆಂದು ಗೊತ್ತಾಗಬೇಕು. ಕೃಷ್ಣ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ರು. ಆದರೆ, ಇದುವರೆಗೂ ಅದು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ತೀರ್ಮಾನ ಮಾಡಿಲ್ಲ. ಹೀಗಾಗಿ, ಈ ಎಲ್ಲಾ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡ್ತೀವಿ ಎಂದರು.
'ಕಾಂಗ್ರೆಸ್‌ನವರು ಸರ್ಕಾರಕ್ಕೆ ಅನುಕೂಲ ಮಾಡಿಕೊಡ್ತಾರೆ'
ನಿನ್ನೆ ಸದನಲ್ಲಿ ಅಜೆಂಡಾದಲ್ಲಿ ಇಲ್ಲದೇ ಮತಾಂತರ ಕಾಯ್ದೆ ಮಂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಬಹಿಷ್ಕಾರ ಮಾಡಿದ್ರು. ನಾವು ಮತಾಂತರ ನಿಷೇಧ ಕಾಯಿದೆಗೆ ವಿರೋಧ ಮಾಡ್ತೇವೆ. ವಿಧಾನ ಪರಿಷತ್‌ನಲ್ಲಿ ನಾವು ವಿರೋಧ ಮಾಡ್ತೇವೆ. ಆದರೆ, ಕಾಂಗ್ರೆಸ್‌ನವರು ಸಭಾತ್ಯಾಗ ಮಾಡಿ, ಕಾಯ್ದೆ ಪಾಸ್ ಮಾಡಿಕೊಳ್ಳಲು ಸರ್ಕಾರಕ್ಕೆ ಅನುಕೂಲ ಮಾಡಿ ಕೊಟ್ಟಿದ್ದಾರೆ.
ವಿಧೇಯಕದ ಮಾಹಿತಿ ಇಲ್ಲದೇ ಅಚಾನಕ್ಕಾಗಿ ತಂದಿದ್ದಾರೆ. ಮತಾಂತರ ಕಾಯ್ದೆ ಸಂಬಂಧ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಬೆಳಗಾವಿ ಅಧಿವೇಶ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಐದು ದಿನ ಸದನದಲ್ಲಿ ಏನು ಚರ್ಚೆ ಆಗಿದೆ. ಸಚಿವ ಭೈರತಿ ವಿಚಾರವನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿ ಅವರು ಸದನ ಬಹಿಷ್ಕಾರ ಮಾಡಿದ್ದಾರೆ. ನನಗೆ ಟಿಎ ಡಿಎ ತಗೊಳ್ಳುವ ನಿಟ್ಟಿನಲ್ಲಿ ಸಹಿ ಹಾಕಲು ಬರುವ ಅಗತ್ಯ ಇಲ್ಲ. ಉ.ಕರ್ನಾಟಕದ ಚರ್ಚಗೆ ಅವಕಾಶ ನೀಡುತ್ತಾರೆ ಎಂಬ ಕಾರಣಕ್ಕೆ ನಾನು ಬೆಳಗಾವಿ ಅಧಿವೇಶನಕ್ಕೆ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಕ್ರಮ ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ; ಮಾಜಿ ಸಿಎಂ ಹೆಚ್‌ಡಿಕೆ