ಚಿಕ್ಕೋಡಿ: ವಿವಿಧ ಬಗೆಯ ಲಕ್ಷಾಂತರ ಮೌಲ್ಯದ ಮಾಲುಗಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಕಂಟೇನರ್ ಟ್ರಕ್ಗಳನ್ನೇ ಹೈಜಾಕ್ ಮಾಡಿ ಅದರಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಹರಿಯಾಣ ಮೂಲದ ಅಬೀದ್ ಜುಮ್ಮೆಖಾನ್ (32), ರಾಜಸ್ಥಾನ ಮೂಲದ ಅಶ್ವಿನ್ ಜೈನ್(42) ಹಾಗೂ ಉತ್ತರ ಪ್ರದೇಶದ ರಿಜ್ವಾನ್ ಬಿಸೆಂಬರಾ (22) ಬಂಧಿತರು. ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಹರಿಯಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮೂವರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಡ್ರಾಪ್ ಕೇಳುವ ನೆಪ..:
ಮೂವರು ಖದೀಮರು ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದು ಅದನ್ನೇ ಬಂಡವಾಳ ಮಾಡಿಕೊಂಡು, ಮುಂಬೈಗೆ ಹೋಗುವವರಿದ್ದೇವೆ, ಹೋಗಲು ಬಸ್ ವ್ಯವಸ್ಥೆ ಇಲ್ಲ. ಹೀಗಾಗಿ ನಮ್ಮನ್ನು ಕರೆದುಕೊಂಡು ಹೋಗುವಂತೆ ಟಯರ್ ತುಂಬಿದ ಕಂಟೇನರ್ ಚಾಲಕನಿಗೆ ಮನವಿ ಮಾಡಿಕೊಳ್ಳುತ್ತಾರೆ. ಖದೀಮರ ಮಾತು ನಂಬಿದ ಅಮಾಯಕ ಚಾಲಕ ತಮಿಳುನಾಡಿನ ಚೆನ್ನೈನಿಂದ ಆರೋಪಿಗಳನ್ನು ತನ್ನ ವಾಹನದಲ್ಲಿ ಕರೆದುಕೊಂಡು ಬರುತ್ತಾನೆ.
ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸ್ತಾರೆ:
ಆದ್ರೆ, ಮೊದಲೇ ಕುತಂತ್ರ ಮಾಡಿಕೊಂಡು ಲಾರಿ ಹತ್ತಿದ್ದ ಆರೋಪಿಗಳು ಬರುವಾಗ ನಿದ್ರೆ ಮಾತ್ರೆಗಳನ್ನು ತಮ್ಮ ಜೊತೆಗೆ ತಂದಿದ್ದರು. ಲಾರಿ ಚಾಲಕನೊಂದಿಗೆ ಸಲುಗೆ ಬೆಳೆಸಿಕೊಂಡು ಮಾರ್ಗಮಧ್ಯದಲ್ಲಿ ಚಹಾ ಕುಡಿಯುವ ನೆಪದಲ್ಲಿ ಚಹಾದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿಕೊಡುತ್ತಾರೆ. ನಂತರ ಬೆಳಗಾವಿಯ ಕಣಬರ್ಗಿ ಶೆಡ್ವೊಂದರಲ್ಲಿ ಕಂಟೇನರ್ ಟ್ರಕ್‌ನಲ್ಲಿದ್ದ ಟಯರ್ಗಳನ್ನು ಅನ್‌ಲೋಡ್ ಮಾಡಿ ನಂತರ ಕಂಟೇನರ್ ಟ್ರಕ್ ಅನ್ನು ಚಿಕ್ಕೋಡಿ ತಾಲೂಕಿನ ಕಬ್ಬೂರ ಕ್ರಾಸ್ ಬಳಿ ನಿಲ್ಲಿಸಿ ಎಸ್ಕೇಪ್ ಆಗಿದ್ದರು.
ಕಂಟೇನರ್ನಲ್ಲಿದ್ದ ಟಯರ್ಗಳು ಕಳ್ಳತನ ಆಗಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಅನ್ನುಸಿಂಗ್ ಎಂಬುವವರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಚಿಕ್ಕೋಡಿ ಪೊಲೀಸರು ರಾಜಸ್ಥಾನ, ಹರಿಯಾಣ ಹಾಗೂ ಉತ್ತರ ಪ್ರದೇಶ ಮೂಲದ ಮೂವರು ಕಳ್ಳರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಟಾಟಾ ಕಂಪನಿಯ ಕಂಟೇನರ್ ಟ್ರಕ್‌ನಲ್ಲಿದ್ದ ಸೀಯೆಟ್ ಕಂಪನಿಯ 30,72,291 ಮೌಲ್ಯದ 1,308 ಟಯರ್ಗಳು ಸೇರಿ, ಬಿಸ್ಕೆಟ್ ತುಂಬಿದ್ದ ಮತ್ತೊಂದು ಕಂಟೇನರ್ ಲಾರಿಯನ್ನೂ ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ತುಮಕೂರಿನಲ್ಲಿ ಭೀಕರ ಅಪಘಾತ: ನಾಲ್ವರು ರೈತರ ಸಾವು
ಈ ಆರೋಪಿಗಳ ವಿರುದ್ಧ ಹೊರ ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿವೆ. ಹೀಗಾಗಿ ಇವರು ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ 14 ದಿನಗಳ ಪೊಲೀಸ್ ಕಸ್ಟಡಿಗೆ ಕೊಡುವಂತೆ ಚಿಕ್ಕೋಡಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.