ಬೆಳಗಾವಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ. ಪತ್ರಕರ್ತರ ಸೋಗಿನಲ್ಲಿ ಮನೆಗಳಿಗೆ ನುಗ್ಗಿ ತಪಾಸಣೆ ಮಾಡುವ ಮಟ್ಟಕ್ಕೂ ನಕಲಿ ಪತ್ರಕರ್ತರು ಮುಂದಾಗಿದ್ದಾರೆ. ಹೀಗೆ ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ಮೂವರು ಖದೀಮರು ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು ನೆಪದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಲ್ಲದೇ ಮಹಿಳೆ ಕೈಹಿಡಿದು ಎಳೆದಾಡಿದ್ದಾರೆ ಎನ್ನಲಾಗ್ತಿದೆ. ಈ ಸುದ್ದಿ ತಿಳಿದ ನಿಪ್ಪಾಣಿ ಪೊಲೀಸರು ಮೂವರು ನಕಲಿ ಪತ್ರಕರ್ತರನ್ನ ಬಂಧಿಸಿದ್ದಾರೆ.
ಸುನೀತಾ ಎಂಬ ಮಹಿಳೆ ನೀಡಿದ ದೂರಿನಡಿ ನಕಲಿ ಯೂಟ್ಯೂಬ್ ಪತ್ರಕರ್ತರಾದ ಗೋಕಾಕ ಪಟ್ಟಣದ ಅಮರ್ ಕೊಡತೆ, ಘಟಪ್ರಭಾ ಗ್ರಾಮದ ವಿವೇಕಾನಂದ ಕುದರಿಮಠ ಹಾಗೂ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಗಂಗಾಧರ ಶಿರಗಾವೆ ಎಂಬುವರನ್ನು ನಿಪ್ಪಾಣಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂದು ಬೆದರಿಕೆ ಹಾಕಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ಸುನೀತಾ ಪಾಟೀಲ್ ಎಂಬ ಮಹಿಳೆ ಮನೆಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡಿದ್ದಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ ನೊಂದ ಮಹಿಳೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ನಕಲಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಮಹಿಳೆಯ ದೂರಿನ ಮೇರೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ಪತ್ರಕರ್ತರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಕೈಯಲ್ಲಿ ಒಂದು ಲೋಗೋ ಹಿಡಿದು ನಾನು ಪತ್ರಕರ್ತ ಎಂದು ಜನರಿಗೆ, ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿರುವ ಇಂತಹ ನಕಲಿ ಪತ್ರಕರ್ತರನ್ನ ಮಟ್ಟ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಓದಿ: ಲೈವ್ ವರದಿ ಮಾಡುತ್ತಿದ್ದಾಗ ದುರ್ವರ್ತನೆ; ಬಾಲಕನ ಕೆನ್ನೆಗೆ ಬಾರಿಸಿದ ಪತ್ರಕರ್ತೆ