ಅಥಣಿ (ಬೆಳಗಾವಿ): ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣದ ಸಲುವಾಗಿ ನಡೆದ ಭೂಮಿ ಪೂಜೆಯಲ್ಲಿ ಸಚಿವ ಶ್ರೀಮಂತ ಪಾಟೀಲ ಮರಾಠಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದಕ್ಕೆ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ಸಚಿವರಿಗೆ ಕನ್ನಡ ಭಾಷೆ ಬರುವುದಿಲ್ಲ. ಆದ್ದರಿಂದ ನಮ್ಮ ಮತಕ್ಷೇತ್ರದ ಬಳ್ಳಿಗೇರಿ ಗ್ರಾಮದಲ್ಲಿ ಆರಂಭವಾಗುತ್ತಿರುವ ಸಕ್ಕರೆ ಕಾರ್ಖಾನೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದ್ದು, ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಮರಾಠಿಯಲ್ಲಿ ಮನವರಿಕೆ ಮಾಡಿದ್ದೇನೆ. ನನಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವಿದೆ. ವಿಧಾನಸೌಧದಲ್ಲಿಯೂ ಕನ್ನಡ ಮಾತನಾಡುತ್ತೇವೆ. ಯಾರೂ ನನ್ನ ಮರಾಠಿ ಭಾಷಣವನ್ನು ತಪ್ಪಾಗಿ ಭಾವಿಸಬಾರದು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾರಾಷ್ಟ್ರದ ಸಚಿವರಿಗೆ ಜನತೆಯ ಸಮಸ್ಯೆ ಬಗ್ಗೆ ತಿಳಿಹೇಳುವ ಸಲುವಾಗಿ ಮರಾಠಿ ಮಾತನಾಡಿದ್ದನ್ನು ಬಿಟ್ಟರೆ, ಇನ್ನುಳಿದ ಎಲ್ಲ ಮಾತುಗಳನ್ನು ಕನ್ನಡದಲ್ಲಿಯೇ ಆಡಿದ್ದೇನೆ. ಇದನ್ನು ಯಾರೂ ತಪ್ಪು ಅರ್ಥೈಸಿಕೊಳ್ಳಬಾರದೆಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.