ಬೆಳಗಾವಿ: ನಾಳೆ ಸೂರ್ಯಗ್ರಹಣ ಗೋಚರ ಹಿನ್ನೆಲೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಶಾಹಾಪೂರ ನಗರದಲ್ಲಿರುವ ಶ್ರೀಕಪಿಲೇಶ್ವರ ದೇವಸ್ಥಾನದಲ್ಲಿ ಗ್ರಹಣ ದೋಷ ಮುಕ್ತಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿಶೇಷ ಪೂಜೆ, ಹೋಮ ಹವನಗಳು ನಡೆಯಲಿವೆ.
ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಮಾಡುವುದರಿಂದ ಗ್ರಹಣ ದೋಷವಾಗಲಿದೆ ಎಂಬ ನಂಬಿಕೆ ಹಿನ್ನೆಲೆ ಬೆಳಗ್ಗೆ 6ರಿಂದ ಮಧ್ಯಾಹ್ನ 2.30ರವರೆಗೆ ಶ್ರೀ ಕಪಿಲೇಶ್ವರ ಮೂರ್ತಿಗೆ ಬಿಲ್ವಪತ್ರೆ, ರುದ್ರಾಭಿಷೇಕ, ಹೋಮ ಹವನಗಳು ಸೇರಿದಂತೆ ಇನ್ನಿತರ ಪೂಜೆಗಳು ನಡೆಯಲಿವೆ.
ಇಂದು ಸಂಜೆ 6ರಿಂದಲೇ ಸೂರ್ಯಗ್ರಹಣ ದೋಷ ಕಪಿಲೇಶ್ವರನಿಗೆ ತಟ್ಟದಂತೆ ದೇವಸ್ಥಾನದ ಬಾಗಿಲಿಗೆ ಪರದೆ ಹಾಕುವ ಮೂಲಕ ಮುಚ್ಚಲಾಗುವುದು. ಗ್ರಹಣ ಮುಗಿದ ಬಳಿಕ ಎಂದಿನಂತೆ ಭಕ್ತರಿಗೆ ವಿಶೇಷ ಪೂಜೆಗಳನ್ನು ಏರ್ಪಡಿಸಲಾಗುವುದು ಎಂದು ಶ್ರೀ ಕಪಿಲೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ರೇಣುಕಾ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಸಕಲ ಸಿದ್ಧತೆ
ಸೂರ್ಯಗ್ರಹಣ ಮತ್ತು ಮಣ್ಣೆತ್ತಿನ ಅಮವಾಸ್ಯೆ ಇರುವುದರಿಂದ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಜೂನ್ 30ರವರೆಗೆ ಈ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಇದೆ.
ಇಂದು ಸಂಜೆ 6.15ಕ್ಕೆ ದೇವಸ್ಥಾನದಲ್ಲಿ ಸೂರ್ಯಗ್ರಹಣದ ವೇದಾರಂಭ ಆರಂಭವಾಗಲಿದೆ. ಪ್ರತಿ ಅಮವಾಸ್ಯೆಯಂತೆ ಮಧ್ಯರಾತ್ರಿ 1.30 ರಿಂದ ಬೆಳಗ್ಗೆ 7 ಗಂಟೆಯವರೆಗೆ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.
ನಾಳೆ ಬೆಳಗ್ಗೆ 10 ಗಂಟೆ 14 ನಿಮಿಷಕ್ಕೆ ಗ್ರಹಣ ಸ್ಪರ್ಶ ಕಾಲ, ಬೆಳಗ್ಗೆ 11 ಗಂಟೆ 55 ನಿಮಿಷಕ್ಕೆ ಗ್ರಹಣ ಮಧ್ಯಕಾಲ ಹಾಗೂ ಮಧ್ಯಾಹ್ನ 1 ಗಂಟೆ 45 ನಿಮಿಷ ಗ್ರಹಣ ಮೋಕ್ಷ ಕಾಲ ಇರಲಿದೆ. ಗ್ರಹಣಕ್ಕೂ ಮುನ್ನ ಪ್ರತಿ ನಿತ್ಯದಂತೆ ರೇಣುಕಾ ಯಲ್ಲಮ್ಮದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ಗ್ರಹಣ ಸಮಾಪ್ತಿ ಬಳಿಕ ದೇವಸ್ಥಾನ ಶುಚಿಗೊಳಿಸಿ ಮತ್ತೆ ವಿಶೇಷ ಪೂಜೆ, ವಸ್ತ್ರಾಲಂಕಾರ ಮಾಡಲಾಗುತ್ತಿದೆ.